ಇನ್ನು ಮುಂದೆ ಚರ್ಚೆಗಾಗಿ ಜೆ.ಪಿ. ನಡ್ಡಾ ಅವರ ಮನೆ ಅಥವಾ ಕಚೇರಿಗೆ ಹೋಗುವುದಿಲ್ಲ’; ತಟಸ್ಥ ಸ್ಥಳದಲ್ಲಷ್ಟೇ ಮಾತುಕತೆ: ಸೌರವ್ ದಾಸ್

ದೆಹಲಿ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಪ್ರತಿಭಟನಾ ಸ್ಥಳಕ್ಕೆ ಸಾವಿರಾರು ಜನರು ಹರಿದು ಬಂದರು. ಕೇಂದ್ರ ಸಚಿವರ ಮನೆ ಅಥವಾ ಕಚೇರಿಗೆ ಮಾತುಕತೆಗೆ ಹೋಗುವುದಿಲ್ಲ ಎಂದು ಸಿಜೆಪಿ ವಕ್ತಾರ ಸೌರವ್ ದಾಸ್ ತಿಳಿಸಿದ್ದಾರೆ.

ಮಾತುಕತೆಗಾಗಿ ಕಾನ್ಸ್ಟಿಟ್ಯೂಷನ್ ಕ್ಲಬ್ ಅನ್ನು ಸ್ಥಳವಾಗಿ ನಾವು ಸೂಚಿಸಿದ್ದೇವೆ. ಆದರೆ ಅದಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿಲ್ಲ. ತಟಸ್ಥ ಸ್ಥಳದಲ್ಲಷ್ಟೇ ಮಾತುಕತೆ ನಡೆಯಬೇಕು. ಜೆ.ಪಿ. ನಡ್ಡಾ ಅವರ ಮನೆಗೆ ಚರ್ಚೆಗೆ ಹೋಗುವುದಿಲ್ಲ. ಕಳೆದ ಬಾರಿ ಮಾತುಕತೆಗೆ ಹೋದಾಗ ಪೊಲೀಸರು ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದರು. ಅದು ಮತ್ತೆ ನಡೆಯಲು ನಾವು ಅವಕಾಶ ನೀಡುವುದಿಲ್ಲ. ಇನ್ನು ಮುಂದೆ ಮಾತುಕತೆಗೆ ಯಾವುದೇ ಸಾಧ್ಯತೆಯಿಲ್ಲ ಎಂದು ಸೌರವ್ ದಾಸ್ ಹೇಳಿದರು.

ಇದೇ ವೇಳೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋನಂ ವಾಂಗ್ಚುಕ್ ಅವರು ತಮ್ಮ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಬೇಕೆಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮನವಿ ಮಾಡಿದ್ದಾರೆ.

“ನಿಮ್ಮ ಈ ತ್ಯಾಗವು ದೇಶದಾದ್ಯಂತ ಸಾವಿರಾರು ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಜುಲೈ 20ರಂದು ವಿವಿಧ ರಾಜ್ಯಗಳಿಂದ ಯುವಕರು ನಿಮಗೂ ಹಾಗೂ ಈ ಚಳವಳಿಗೂ ಐಕ್ಯತೆ ವ್ಯಕ್ತಪಡಿಸಲು ಬಂದಿದ್ದರು. ಯಾವುದೇ ಒಬ್ಬ ವ್ಯಕ್ತಿಗಿಂತಲೂ ಈ ಹೋರಾಟ ದೊಡ್ಡದು ಎಂಬುದನ್ನು ಮತ್ತು ವಿದ್ಯಾರ್ಥಿಗಳು ನ್ಯಾಯಕ್ಕೆ ಅರ್ಹರು ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ.

ಆದರೆ ಈಗ ನಿಮ್ಮ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದೆ. ನೀವು ಉಪವಾಸವನ್ನು ಅಂತ್ಯಗೊಳಿಸಿದರೂ ಈ ಹೋರಾಟ ನಿಲ್ಲುವುದಿಲ್ಲ ಎಂದು ನಾವು ಭರವಸೆ ನೀಡುತ್ತೇವೆ. ಪರೀಕ್ಷಾ ವ್ಯವಸ್ಥೆಯಲ್ಲಿ ನ್ಯಾಯ ಸಿಗುವವರೆಗೆ ನಮ್ಮ ಬೇಡಿಕೆಗಳನ್ನು ಮುಂದುವರಿಸುತ್ತೇವೆ. ಪ್ರತಿಭಟನೆಗಳನ್ನೂ ಮುಂದುವರಿಸಿ, ಈ ಹೋರಾಟವನ್ನು ಇನ್ನಷ್ಟು ಬಲಪಡಿಸುತ್ತೇವೆ. ಇದನ್ನು ಜೀವಂತವಾಗಿಡಲು ನಮ್ಮಿಂದ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತೇವೆ” ಎಂದು ಅಭಿಜಿತ್ ದೀಪ್ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ಮೂರು ದಿನಗಳಲ್ಲಿ ನಡೆದ ಪ್ರತಿಭಟನೆಗಳಿಗೆ ಸಂಬಂಧಿಸಿ ಪ್ರತಿಭಟನಾಕಾರರ ವಿರುದ್ಧ ಸುಮಾರು ಹತ್ತು ಪ್ರಕರಣಗಳನ್ನು ದೆಹಲಿ ಪೊಲೀಸರು ದಾಖಲಿಸಿದ್ದಾರೆ. ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರ ವಿರುದ್ಧ ಪೊಲೀಸರು ಕೈಗೊಂಡ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಿದೆ.

ದೆಹಲಿ ಬೀದಿಗಳಲ್ಲಷ್ಟೇ ಅಲ್ಲದೆ, ದೇಶಾದ್ಯಂತವೂ ಪ್ರತಿಭಟನೆಗಳನ್ನು ಆಯೋಜಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ರಾಜ್ಯ ಕಾಂಗ್ರೆಸ್ ಸಮಿತಿಗಳ (PCC) ನೇತೃತ್ವದಲ್ಲಿ ಮೆರವಣಿಗೆಗಳು ಹಾಗೂ ಧರಣಿಗಳನ್ನು ನಡೆಸಲು ಸಿದ್ಧತೆಗಳು ನಡೆಯುತ್ತಿವೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!