ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಪ್ರೊ.ಕೆ.ಅಲಿಕುಟ್ಟಿ ಮುಸ್ಲಿಯಾರ್ ನಿಧನ

1945ರಲ್ಲಿ ಮಲಪ್ಪುರಂ ಜಿಲ್ಲೆಯ ಇರುಂಬುಝಿ ಸಮೀಪದ ತೆಕ್ಕುಮ್ಮುರ್ರಿಯ ತಿರುಕ್ಕಾಡ್‌ನಲ್ಲಿ ಜನಿಸಿದ ಅಲಿಕುಟ್ಟಿ ಮುಸ್ಲಿಯಾರ್, ಕುನ್ನತ್ ಮೂಸಾ ಹಾಜಿ ಹಾಗೂ ಮಡಂಬಿ ಇಯ್ಯತುಟ್ಟಿ ದಂಪತಿಯ ಪುತ್ರರಾಗಿದ್ದರು.

1976ರಲ್ಲಿ ಸಮಸ್ತ ಮಲಪ್ಪುರಂ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಂಘಟನಾ ಜೀವನಕ್ಕೆ ಹೊಸ ಹೆಜ್ಜೆಯಿಟ್ಟ ಅವರು, 1978ರಿಂದ ಜಾಮಿಯಾ ಹಳೆಯ ವಿದ್ಯಾರ್ಥಿಗಳ ಸಂಘಟನೆ ‘ಓಸ್ಫೋಝಾನಾ’ದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1986ರಲ್ಲಿ ಸಮಸ್ತ ಮುಶಾವರದ ಸದಸ್ಯರಾಗಿಯೂ ಆಯ್ಕೆಯಾದರು.

1992ರಲ್ಲಿ ಎಸ್‌ವೈಎಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅವರು, 2016ರವರೆಗೆ ಸುದೀರ್ಘ 24 ವರ್ಷಗಳ ಕಾಲ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. 2009ರಿಂದ ಸಮಸ್ತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿದ್ದ ಅವರು, 2010ರಲ್ಲಿ ಸಮಸ್ತದ ಜಂಟಿ ಕಾರ್ಯದರ್ಶಿಯಾಗಿದ್ದರು. ಬಳಿಕ 2016ರಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು.

2003ರಿಂದ ಪಟ್ಟಿಕ್ಕಾಡ್ ಜಾಮಿಯಾ ನೂರಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಅವರು, 2013ರಿಂದ ಕಾಸರಗೋಡು ಜಿಲ್ಲಾ ಖಾಝಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.2003ರಿಂದ 2006ರವರೆಗೆ ಕೇರಳ ಹಜ್ ಸಮಿತಿಯ ಅಧ್ಯಕ್ಷರಾಗಿದ್ದ ಅಲಿಕುಟ್ಟಿ ಮುಸ್ಲಿಯಾರ್, 2006ರಿಂದ 2009ರವರೆಗೆ ಭಾರತ ಹಜ್ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಹಜ್ ಸಮಿತಿಯ ಅಧ್ಯಕ್ಷ ಸ್ಥಾನ ಅಲಂಕರಿಸಿದ ಮೊದಲ ಸಚಿವರಲ್ಲದ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.

2004ರಿಂದ ರಾಜ್ಯ ಮುಸ್ಲಿಮ್ ಅನಾಥಾಶ್ರಮ ಸಮನ್ವಯ ಸಮಿತಿಯ ಉಪಾಧ್ಯಕ್ಷರಾಗಿದ್ದ ಅವರು, 2014ರಿಂದ ಸುಪ್ರಭಾತಂ ಪತ್ರಿಕೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಜೊತೆಗೆ ಅಲ್ ಮುಅಲ್ಲಿಮ್, ಅಲ್ ನೂರ್ ನಿಯತಕಾಲಿಕೆಗಳು ಹಾಗೂ ಸುನ್ನಿ ಅಫ್ಕಾರ್ ಪ್ರಕಟಣೆಗಳ ಮುಖ್ಯ ಸಂಪಾದಕರಾಗಿದ್ದರು.

ಧಾರ್ಮಿಕ ನಾಯಕತ್ವ, ಶಿಕ್ಷಣದ ಬೆಳವಣಿಗೆ ಹಾಗೂ ಸಮಾಜಮುಖಿ ಸೇವೆಗಳ ಮೂಲಕ ವಿಶಿಷ್ಟ ಛಾಪು ಮೂಡಿಸಿದ ಶೈಖುನಾ ಪ್ರೊ. ಕೆ. ಅಲಿಕುಟ್ಟಿ ಮುಸ್ಲಿಯಾರ್ ಅವರ ನಿಧನವು ಸಮಸ್ತ ಕುಟುಂಬಕ್ಕೂ, ಮುಸ್ಲಿಂ ಸಮುದಾಯಕ್ಕೂ ಮತ್ತು ಕೇರಳದ ಸಾರ್ವಜನಿಕ ಬದುಕಿಗೂ ತುಂಬಲಾರದ ನಷ್ಟವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!