ನವದೆಹಲಿ: ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿಯಾಗಿರುವ ಡಾ.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ ಮೇಲೆ ನಿರಂತರ ದಾಳಿ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಚುನಾವಣಾ ಆಯೋಗ ಸೇರಿದಂತೆ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ತೇಜೋವಧೆ ಮಾಡುವುದನ್ನೇ ತನ್ನ ಮುಖ್ಯ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ಖೇದಕರ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗ ನೀಡಿರುವ ಇತ್ತೀಚಿನ ಸ್ಪಷ್ಟನೆಯು ರಾಹುಲ್ ಗಾಂಧಿಯವರ ಈ ಬೇಜವಾಬ್ದಾರಿ ಧೋರಣೆಯನ್ನು ಮತ್ತೊಮ್ಮೆ ದೇಶದ ಮುಂದೆ ಬೆತ್ತಲೆಗೊಳಿಸಿದೆ. ಜನಾದೇಶ ತಮ್ಮ ವಿರುದ್ಧ ಬಂದಾಗಲೆಲ್ಲಾ ರಾಹುಲ್ ಗಾಂಧಿ ಸಾಂವಿಧಾನಿಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡುವ ಛಾಳಿ ಮುಂದುವರಿಸುತ್ತಾರೆ. ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸುವುದು, ಚುನಾವಣಾ ಪ್ರಕ್ರಿಯೆಯನ್ನು ಅನುಮಾನಿಸುವುದು, ಇವಿಎಂ ಮೇಲೆ ಗೂಬೆ ಕೂರಿಸುವುದು ಅವರ ರಾಜಕೀಯ ತಂತ್ರಗಾರಿಯಾಗಿಬಿಟ್ಟಿದೆ. ಪ್ರತಿ ಬಾರಿಯೂ ಮತದಾರದ ತೀರ್ಪನ್ನು ಸ್ವೀಕರಿಸುವ ಸೌಜನ್ಯ ತೋರುವ ಬದಲು, ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬೊಟ್ಟು ಮಾಡಿ, ದೇಶದಲ್ಲಿ ಗೊಂದಲದ ವಾತಾವರಣ ಹುಟ್ಟುಹಾಕಲು ಪ್ರಯತ್ನಿಸುವುದೇ ರಾಹುಲ್ ಗಾಂಧಿ ಕಾಯಕ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ ಅಥವಾ ಕರ್ನಾಟಕದಲ್ಲಿ ಗೆದ್ದಾಗ ಚುನಾವಣಾ ಆಯೋಗ ಅಥವಾ ಇವಿಎಂ ಸರಿಯಾಗಿರುತ್ತದೆ. ಆದರೆ ಉಳಿದಡೆ ಸೋತಾಗ ಸಾಂವಿಧಾನಿಕ ಸಂಸ್ಥೆಗಳನ್ನು ದೂಷಿಸುತ್ತವೆ . ಸಾಲು ಸಾಲು ಚುನಾವಣಾ ಸೋಲುಗಳನ್ನು ಜೀರ್ಣಿಸಿಕೊಳ್ಳಲಾಗದೇ ಚುನಾವಣಾ ಆಯೋಗ ತೇಜೋವಧೆ ಮಾಡುವುದನ್ನು ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡಿರುವುದು ದುರಂತ. ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸುವ ಮೂಲಕ ಸಾಂವಿಧಾನಿಕ ಸಂಸ್ಥೆಗಳನ್ನು ಹತ್ತಿಕ್ಕುವ ಪಿತೂರಿ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಸುತ್ತ ಎಬ್ಬಿಸಲಾದ ಇತ್ತೀಚಿನ ವಿವಾದವೇ ಇದಕ್ಕೆ ಸ್ಪಷ್ಟ ನಿದರ್ಶನ. ಚುನಾವಣಾ ಆಯೋಗದ ಆಡಳಿತಾತ್ಮಕ ವಿಷಯವನ್ನೇ ಬಹುದೊಡ್ಡ ‘ಸಾಂವಿಧಾನಿಕ ಬಿಕ್ಕಟ್ಟು’ ಎಂದು ಬಿಂಬಿಸಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾಂವಿಧಾನಿಕ ಸಂಸ್ಥೆಯ ನಂಬಿಕೆಗೆ ಧಕ್ಕೆ ತರಲು ಯತ್ನಿಸುತ್ತಿವೆ. ಆದರೆ ಚುನಾವಣಾ ಆಯೋಗ ನೀಡಿದ ಸ್ಪಷ್ಟನೆ ಈ ಎಲ್ಲಾ ಆರೋಪಗಳನ್ನು ಸುಳ್ಳಾಗಿಸಿದೆ. ಎಸ್ಐಆರ್ ಗೆ ಸಂಬಂಧಿಸಿದ ನಿರ್ಧಾರಗಳನ್ನು ಮೂವರೂ ಆಯುಕ್ತರು ಸರ್ವಾನುಮತದಿಂದಲೇ ತೆಗೆದುಕೊಂಡಿದ್ದಾರೆ. ಕ್ಯಾಬಿನೆಟ್ ಕಾರ್ಯದರ್ಶಿಗೆ ಬರೆದ ಪತ್ರಕ್ಕೂ ಚುನಾವಣಾ ನೀತಿಗೂ ಯಾವುದೇ ಸಂಬಂಧವಿಲ್ಲ. ಇತ್ತ ಸುಪ್ರೀಂ ಕೋರ್ಟ್ ಕೂಡ ಎಸ್ಐಆರ್ ಗೆ ಸಂಬಂಧಿಸಿದ ಅರ್ಜಿ ನಮೂನೆ 6 ಅನ್ನು ಎತ್ತಿಹಿಡಿದಿದೆ. ಹೀಗಿರುವಾಗ ರಾಜಕೀಯ ಲಾಭಕ್ಕಾಗಿ ಆಧಾರರಹಿತ ಕಥೆ ಕಟ್ಟಿ ಸಾಂವಿಧಾನಿಕ ಸಂಸ್ಥೆಯನ್ನೇ ಸಂಶಯದಿಂದ ನೋಡುವಂತೆ ಮಾಡುವುದು ಕಾಂಗ್ರೆಸ್ನ ಉದ್ದೇಶವೇ ಎಂದು ಕ್ಯಾ. ಚೌಟ ಪ್ರಶ್ನಿಸಿದ್ದಾರೆ.

ಕೇರಳದಲ್ಲಿ ಕಾಂಗ್ರೆಸ್ ನಾಯಕರು ಒಪ್ಪಿಕೊಂಡಿರುವ ‘ಎಸ್ಐಆರ್’, ಬೇರೆಡೆ ಜಾರಿಯಾದರೆ ‘ಪ್ರಜಾಪ್ರಭುತ್ವದ ಮೇಲಿನ ದಾಳಿ’ ಹೇಗಾಗುತ್ತದೆ? ನಕಲಿ ಮತದಾರರನ್ನು ತೆಗೆದುಹಾಕಲು ಎಸ್ಐಆರ್ ನೆರವಾಗಿದೆ ಎಂದು ಸ್ವತಃ ನಿಮ್ಮ ನಾಯಕ ಶಶಿ ತರೂರ್ ಒಪ್ಪಿಕೊಂಡಿದ್ದಾರೆ. ಹಾಗಾದರೆ ಕೇರಳದಲ್ಲಿ ನಿಮ್ಮ ಗೆಲುವನ್ನೂ ಪ್ರಶ್ನಿಸಬೇಕೇ? ನಿಮ್ಮ ಮೂಗಿನ ನೇರಕ್ಕೆ ತಕ್ಕಂತೆ ರಾಜಕೀಯ ನಿಲುವು ಬದಲಾಯಿಸುವುದು ಎಷ್ಟು ಸರಿ?
ಮೃತಪಟ್ಟವರ ಮತ್ತು ಸ್ಥಳಾಂತರಗೊಂಡವರ ಹೆಸರಲ್ಲಿದ್ದ ಲಕ್ಷಾಂತರ ನಕಲಿ ಮತದಾರ ಹೆಸರುಗಳನ್ನು ತೆಗೆದುಹಾಕಿ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ಎಸ್ಐಆರ್ ಅತ್ಯಗತ್ಯ. ಅರ್ಹ ನಾಗರಿಕರ ಹಕ್ಕನ್ನು ರಕ್ಷಿಸಿ, ಅಕ್ರಮ ತಡೆಯುವುದೇ ಈ ಪ್ರಕ್ರಿಯೆಯ ಮೂಲ ಉದ್ದೇಶವಾಗಿದೆ ಎಂದಿದ್ದಾರೆ.
ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯೇ ಹೊರತು ರಾಜಕೀಯ ಎದುರಾಳಿಯಲ್ಲ. ವಿಶ್ವದ ಬೃಹತ್ ಪ್ರಜಾಪ್ರಭುತ್ವದ ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವುದು ಅದರ ಜವಾಬ್ದಾರಿ. ಆಯೋಗದ ನಿರ್ಧಾರಗಳನ್ನು ಪ್ರಶ್ನಿಸುವುದು ತಪ್ಪಲ್ಲ, ಆದರೆ ಪ್ರತಿಯೊಂದು ಸೋಲನ್ನೂ ‘ಸಾಂವಿಧಾನಿಕ ಸಂಚು’ ಎಂದು ಬಿಂಬಿಸುವುದು ರಾಹುಲ್ ಗಾಂಧಿಯವರ ಅಪಕ್ವ ರಾಜಕೀಯ ನಡೆಯನ್ನು ಎತ್ತಿ ತೋರಿಸುತ್ತದೆ ಎಂದು ಸಂಸದರು ಪ್ರತಿಪಾದಿಸಿದ್ದಾರೆ.
ಚುನಾವಣಾ ಆಯೋಗವನ್ನು ಹೊಣೆಗಾರರನ್ನಾಗಿ ಮಾಡುವುದಕ್ಕೂ, ರಾಜಕೀಯ ಲಾಭಕ್ಕಾಗಿ ಅದರ ಗೌರವಕ್ಕೆ ಧಕ್ಕೆ ತರುವುದಕ್ಕೂ ವ್ಯತ್ಯಾಸವಿದೆ. ಪ್ರಬುದ್ಧ ಪ್ರಜಾಪ್ರಭುತ್ವಕ್ಕೆ ಜವಾಬ್ದಾರಿಯುತ ವಿಮರ್ಶೆ ಬೇಕೇ ಹೊರತು, ಸೋತಾಗಲೆಲ್ಲಾ ವಿವಾದ ಸೃಷ್ಟಿಸುವ ಛಾಳಿಯಲ್ಲ. ಜನ ನೀಡಿದ ತೀರ್ಪು ಏನೇ ಇರಲಿ, ಪ್ರತಿಯೊಂದು ಪಕ್ಷವೂ ಆ ಜನಾದೇಶವನ್ನು ಗೌರವಿಸಲೇಬೇಕು.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕತ್ವ ಒಂದನ್ನು ನೆನಪಿಡಬೇಕು; ಚುನಾವಣಾ ಆಯೋಗ ಹೆದರಿಸಲು ಇರುವ ಅಂಪೈರ್ ಅಲ್ಲ, ಮತದಾರರು ನಿಮ್ಮ ಆಟಕ್ಕೆ ಮರುಳಾಗುವ ವೀಕ್ಷಕರೂ ಅಲ್ಲ. ಅಕ್ರಮ ನಡೆದಿದೆ ಎನ್ನಲು ಸೂಕ್ತ ಸಾಕ್ಷ್ಯಗಳಿದ್ದರೆ ಆಯೋಗದ ಮುಂದಿಡಲಿ. ಇಲ್ಲದಿದ್ದರೆ ಸೋಲಿಗೆ ನೆಪ ಹುಡುಕುತ್ತಾ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ಜನರ ನಂಬಿಕೆ ಕೆಡಿಸುವುದನ್ನು ತಕ್ಷಣವೇ ನಿಲ್ಲಿಸಲಿ. ದೇಶಕ್ಕೆ ಬೇಕಿರುವುದು ಸರ್ಕಾರವನ್ನು ಪ್ರಬಲವಾಗಿ ಪ್ರಶ್ನಿಸುವ ಸೃಜನಶೀಲ ವಿರೋಧ ಪಕ್ಷವೇ ಹೊರತು, ಸಾಂವಿಧಾನಿಕ ಸಂಸ್ಥೆಗಳನ್ನು ಬಲಿಪಶು ಮಾಡುವ ಸ್ವಾರ್ಥ ರಾಜಕೀಯವಲ್ಲ ಎಂದು ಹೇಳಿದ್ದಾರೆ.
ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ‘ನವ ಭಾರತ’. ಆಧಾರರಹಿತ ಆರೋಪಗಳ ಬೆಟ್ಟದಡಿ ಸತ್ಯವನ್ನು ಹೂತುಹಾಕಲು ಸಾಧ್ಯವಿಲ್ಲ. ಸಾಂವಿಧಾನಿಕ ಸಂಸ್ಥೆಗಳು ತಮ್ಮ ಸತ್ಯಾಸತ್ಯತೆಯನ್ನು ತಾವೇ ಸ್ಪಷ್ಟಪಡಿಸುವ ಹಾಗೂ ಸುಳ್ಳಿನ ಸರಮಾಲೆಯನ್ನು ’ಸತ್ಯ ’ ದ ಮೂಲಕ ಮೆಟ್ಟಿನಿಲ್ಲುವ ಹೊಸ ಭಾರತ ಇದು. ಹೀಗಿರುವಾಗ ರಾಹುಲ್ ಗಾಂಧಿ ಇನ್ನಾದರೂ ಅರ್ಥಮಾಡಿಕೊಳ್ಳಲಿ. ಆ ಮೂಲಕ ಒಬ್ಬ ಜವಬ್ದಾರಿಯುತ ಪ್ರತಿಪಕ್ಷದ ನಾಯಕನಾಗಿ ವರ್ತಿಸಲಿ ಎಂದು ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

