ಎಸ್‌ಐಆರ್ ಪ್ರಕ್ರಿಯೆ: ಫಾರಂ-6ರಿಂದ ಡಿಕ್ಲರೇಷನ್ ಕೈಬಿಟ್ಟ ಚುನಾವಣಾ ಆಯೋಗ; ಆರು ರಾಜ್ಯಗಳಲ್ಲಿ ಗಡುವು ವಿಸ್ತರಣೆ

ನವದೆಹಲಿ: ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಫಾರಂ-6ರಲ್ಲಿ ಮಹತ್ವದ ಬದಲಾವಣೆ ಮಾಡಿರುವ ಚುನಾವಣಾ ಆಯೋಗ, ಅದರ ಆನ್‌ಲೈನ್ ಆವೃತ್ತಿಯಿಂದ SIR ಘೋಷಣಾ ಪತ್ರವನ್ನು (Declaration) ತೆಗೆದುಹಾಕಿದೆ.ಈ ಹಿಂದೆ ಎರಡು ಪ್ರತ್ಯೇಕ ವಿಭಾಗಗಳನ್ನು ಒಂದೇ ಅರ್ಜಿಯಲ್ಲಿ ಸೇರಿಸಿರುವುದು ಕಾನೂನುಬಾಹಿರ ಎಂದು ಚುನಾವಣಾ ಆಯುಕ್ತರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ, ಮತದಾರರು ಸಲ್ಲಿಸಬೇಕಾದ ಸ್ವಯಂ ಘೋಷಣಾ ಪತ್ರವನ್ನು ಫಾರಂ-6ರಿಂದ ಪ್ರತ್ಯೇಕಗೊಳಿಸಿ ಪ್ರತ್ಯೇಕ ನಮೂನೆಯಾಗಿ ಮುಂದುವರಿಸಲು ನಿರ್ಧರಿಸಲಾಗಿದೆ.

ಹಿಂದಿನ SIRನಲ್ಲಿ ಮತದಾರರ ಹೆಸರು ಅಥವಾ ಅವರ ಪೋಷಕರ ವಿವರಗಳನ್ನು ನೀಡದಿದ್ದರೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಾಗದಂತಹ ವ್ಯವಸ್ಥೆ ಇತ್ತು.ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿಯೂ ಫಾರಂ-6ರಿಂದ ಈ ಘೋಷಣಾ ಪತ್ರವನ್ನು ತೆಗೆದುಹಾಕುವುದಾಗಿ ತಿಳಿಸಿತ್ತು.

ಇದೇ ವೇಳೆ, ಆರು ರಾಜ್ಯಗಳಲ್ಲಿ SIR ಪ್ರಕ್ರಿಯೆಯ ಗಡುವನ್ನು ವಿಸ್ತರಿಸಲಾಗಿದೆ. ದೆಹಲಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಡಿಸೆಂಬರ್ 22ರಂದು ಪ್ರಕಟಿಸಲಾಗುವುದು. ಮಹಾರಾಷ್ಟ್ರ, ನಾಗಾಲ್ಯಾಂಡ್, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ನವೆಂಬರ್ 30ರಂದು ಅಂತಿಮ ಪಟ್ಟಿ ಪ್ರಕಟವಾಗಲಿದೆ.ಇನ್ನೊಂದೆಡೆ, ದೆಹಲಿಯ SIR ಪ್ರಕ್ರಿಯೆಯಲ್ಲಿ ಮುಸ್ತಫಾಬಾದ್‌ನಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂಬ ವರದಿ ಬಹಿರಂಗವಾಗಿದೆ.ಮುಸ್ಲಿಂ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ಬಿಜೆಪಿ ಏಜೆಂಟರು ಸಾಮೂಹಿಕವಾಗಿ ಫಾರಂ-7 ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ಬೂತ್ ಮಟ್ಟದ ಏಜೆಂಟರು ಸಲ್ಲಿಸಿದ್ದ 572 ಫಾರಂ-7 ಅರ್ಜಿಗಳೂ ಮುಸ್ಲಿಂ ಮತದಾರರ ವಿರುದ್ಧವೇ ಇದ್ದವು ಎಂದು ವರದಿಯಾಗಿದೆ.

ಮತದಾರರು ಸ್ಥಳಾಂತರಗೊಂಡಿದ್ದಾರೆ ಅಥವಾ ಮೃತಪಟ್ಟಿದ್ದಾರೆ ಎಂಬ ಕಾರಣ ನೀಡಿ ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ, ಈ ಪೈಕಿ 28 ಮತದಾರರು ಈಗಲೂ ತಮ್ಮ ಮನೆಗಳಲ್ಲೇ ವಾಸಿಸುತ್ತಿದ್ದಾರೆ ಎಂಬುದನ್ನು ದಿ ಹಿಂದೂ ನಡೆಸಿದ ತನಿಖೆ ಬಹಿರಂಗಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!