ಒಡ್ಡೂರು ಫಾರ್ಮ್‌ನಲ್ಲಿ ರೋಮಾಂಚಕ ಆಫ್‌ರೋಡ್ ಮೋಟಾರ್ ಸ್ಪರ್ಧೆ ಇಂದು–ನಾಳೆ

ಮಂಗಳೂರು: ಸಾಮಾನ್ಯವಾಗಿ ರಸ್ತೆಯಲ್ಲಿ ಸಾಗುವ, ಇಂಜಿನ್ ಅಷ್ಟೊಂದು ಶಬ್ದ ಮಾಡದ ನಾಲ್ಕು ಚಕ್ರದ ವಾಹನಗಳು ಮಾರ್ಚ್ 28 ಮತ್ತು 29ರಂದು ಮಂಗಳೂರಿಗೆ ಸಮೀಪದ ಒಡ್ಡೂರು ಫಾರ್ಮ್ ನಲ್ಲಿ ಆರ್ಭಟ ಮಾಡುತ್ತ ತಮ್ಮ ಹೊಸ ಅವತಾರದ ಪ್ರದರ್ಶನ ಮಾಡಲಿವೆ.ಇವು ನಶೆಯಲ್ಲಿದ್ದಂತೆ ಉರುಳಿ ಬೀಳುತ್ತ, ನೆಲ ಬಿಟ್ಟು ಆಕಾಶದ ಗೆಳೆತನ ಮಾಡಲು ಮೇಲೆ ಕುಪ್ಪಳಿಸುತ್ತ ತೆಂಗಿನ ತೋಟ, ಅಡಿಕೆ ಮರ, ಬಾಳೆ ತೋಟ..ಇವುಗಳ ನಡುವೆ ಸಾಮಾನ್ಯವಾಗಿ ರಸ್ತೆಯೇ ಇಲ್ಲದ ಕಠಿಣ ಪಥದಲ್ಲಿ ಭಾರೀ ವೇಗದಿಂದ ಸಾಗಿ ರೋಮಾಂಚಕ ದೃಶ್ಯಗಳನ್ನು ಸೃಷ್ಟಿಸಲಿವೆ.

ಪ್ರಕೃತಿ ಸೌಂದರ್ಯದ ಮಧ್ಯೆ ಹೊಂಡ ಗುಂಡಿ, ಕಡಿದಾದ ದಿಣ್ಣೆ, ಅನಿರೀಕ್ಷಿತ ತಿರುವಿನಲ್ಲಿ ನೀರು ತುಂಬಿದ ಆಳವಾದ ಹೊಂಡ ಅದರಲ್ಲಿ ಅರ್ಧ ಮುಳುಗಿ ಹೋದ ವಾಹನ, ಹೊಂಡದಿಂದ ಮೇಲೇರಿ ಬರಲು ಘರ್ಜಿಸುವ ಮೋಟಾರು ವಾಹನಗಳ ಇಂಜಿನ್ ಗಳು..ಇವೆಲ್ಲ ರೋಮಾಂಚಕ ದೃಶ್ಯಗಳು ಒಡ್ಡೂರು ಫಾರ್ಮ್ ನಲ್ಲಿ ಕಣ್ಣೆದುರೇ ಸಂಭವಿಸಲಿವೆ. ಜೀಪೊಂದು ಕಡಿದಾದ ಹೊಂಡದಿಂದ ಮೇಲೇರಿ ಬರುವಾಗ ಪಲ್ಟಿಯಾಗಿ ಚಕ್ರಗಳು ಆಕಾಶ ನೋಡುತ್ತವೆ.ಇನ್ನೊಂದು ವಾಹನ ನೆಲದ ಮೇಲೆ ಲಂಬ ಕೋನದಲ್ಲಿ ನಿಲ್ಲದೇ ಪುಟಿದೆದ್ದು ನೆಲ ಬಿಟ್ಟು ಮೇಲೆ ಹಾರುತ್ತದೆ. ನಲವತ್ತು ಡಿಗ್ರಿಯಷ್ಟು ವಾಲಿಕೊಂಡು , ಎರಡು ಚಕ್ರಗಳ ಮೇಲೆ ಕುಪ್ಪಳಿಸಿ ಮತ್ತೆ ಪುಟಿದೆದ್ದು ನಾಲ್ಕು ಚಕ್ರಗಳ ಮೇಲೆ ಲಂಬಕೋನದಲ್ಲಿ ನಿಲುತ್ತದೆ. ಈ ವಾಹನಗಳು ಓಡುವಾಗ ಹೊಸ ಹೊಸ ಕೋನಗಳನ್ನು ಸೃಷ್ಟಿಸುತ್ತವೆ . ಸುಂಟರಗಾಳಿಯಂತೆ ಧೂಳಿನ ಮೋಡಗಳನ್ನು ಸೃಷ್ಟಿಸುತ್ತವೆ. ಅಯ್ಯೋ .. ಆ ಜೀಪಿನಿಂದ ಡ್ರೈವರ್ ಹೊರಗೆ ಬಿದ್ದ ಎನ್ನುವಷ್ಟರಲ್ಲಿಯೇ ಡ್ರೈವರ್ ಸ್ಟಿಯರಿಂಗ್ ಬಿಡದೆ ಇನ್ನಷ್ಟು ತನ್ನ ವಾಹನದ ಸೀಟಿಗೆ ಅಂಟಿಕೊಂಡು ಜೀಪನ್ನು ಇನ್ನೊಂದು ನೆಗೆಯುವಿಕೆಯತ್ತ ಮುನ್ನಡೆಸುತ್ತಿರುತ್ತಾನೆ.

ಈ ಸಾಹಸಮಯ ಕ್ರೀಡೆಯಲ್ಲಿ ಜೀವಾಪಾಯವನ್ನು ಬೆನ್ನಿಗಿಟ್ಟುಕೊಂಡೇ ಸ್ಪರ್ಧಿಗಳು ಭಾಗವಹಿಸುತ್ತಾರೆ. ಕೈಕಾಲು ಮುರಿತ ಇವರಿಗೆ ಲೆಕ್ಕಕ್ಕಿಲ್ಲ. ಮೋಟಾರ್ ಸ್ಪೋರ್ಟ್ಸಿನ ಆಕರ್ಷಣೆ್ಯೇ ಅಂತಹದ್ದು. ಕಠಿಣ ಪಥಗಳು, ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಎದುರಾಗುವ ಕಂದಕ, ಅದನ್ನು ನಿಭಾಯಿಸುತ್ತಿದ್ದಂತೆ ಚಕ್ರ ಹೂತುಹೋಗುವಂತಹ ಜವುಗು ನೆಲ, ಅದನ್ನು ದಾಟಿದರೆ ಮತ್ತೆ ಮರುಭೂಮಿಯಂತಹ ಧೂಳು ಮಯ ನೆಲ..ಹೀಗೆ ಅನಿರೀಕ್ಷಿತ ತಿರುವು-ಸವಾಲುಗಳು ಈ ಮೋಟಾರು ಸ್ಪರ್ಧೆಯನ್ನು ಹೆಚ್ಚು ರೋಮಾಂಚಕವಾಗಿಸಿವೆ.

ಭಾರತೀಯ ಮೋಟಾರ್ ಸ್ಪೋರ್ಟ್ಸ್ ಅಸೋಸಿಯೇಶನ್ ಈ ಸಾಹಸಮಯ ಸ್ಪರ್ಧೆಯನ್ನು ಆಯೋಜಿಸಿದೆ. ಈ ವಿಶೇಷ ಆವೃತ್ತಿಗೆ ದೇಶದ ವಿವಿಧ ಭಾಗಗಳಿಂದ ಭಾರಿ ಸ್ಪಂದನೆ ವ್ಯಕ್ತವಾಗಿದೆ, ಸುಮಾರು 3,000ಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸುವ ನಿರೀಕ್ಷೆಯಿದ್ದು, ಕರಾವಳಿ ಭಾಗದಲ್ಲಿ ಆಫ್ ರೋಡ್ ಕ್ರೀಡೆಗೆ ಇರುವ ಅಭಿಮಾನವನ್ನು ಇದು ತೋರಿಸುತ್ತದೆ ಎನ್ನುತ್ತಾರೆ ಸಂಘಟಕರು.

ಈ ಬಾರಿ ವಿಜೇತರಿಗೆ ಒಟ್ಟು 15 ಲಕ್ಷ ರೂ. ಮೌಲ್ಯದ ನಗದು ಬಹುಮಾನ, ಟ್ರೋಪಿ ಮತ್ತು ಗಿಫ್ಟ್ ನೀಡಲಾಗುತ್ತಿದ್ದು, ಇದು ಈ ಸ್ಪರ್ಧೆಯ ವೈಭವವನ್ನು ಇನ್ನಷ್ಟು ಹೆಚ್ಚಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!