ಬಂಟ್ವಾಳದಲ್ಲಿ ವಿಶ್ವ ಆಟಿಸಂ ಜಾಗೃತಿ ದಿನಾಚರಣೆ, ತಜ್ಞರಿಂದ ತರಬೇತಿ ಕಾರ್ಯಾಗಾರ

ಬಂಟ್ವಾಳ: ವಿಕಾಸಂ ಸೇವಾ ಫೌಂಡೇಶನ್ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಯೋಗದಲ್ಲಿ ಗುರುವಾರ ಬಂಟ್ವಾಳ ಲಯನ್ಸ್ ಸೇವಾ ಮಂದಿರದಲ್ಲಿ ವಿಶ್ವ ಆಟಿಸಂ ಜಾಗೃತಿ ದಿನಾಚಣೆ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರಾದ ಮಹಾಬಲ ಕೊಟ್ಟಾರಿ ಉದ್ಘಾಟಿಸಿ ಮಾತನಾಡಿ, ಆಟಿಸಂ ಕುರಿತು ವಿಕಾಸಂ ಸಂಸ್ಥೆ ತೋರುತ್ತಿರುವ ಕಾಳಜಿಯನ್ನು ಶ್ಲಾಘಿಸಿದರು. ಬಂಟ್ವಾಳ ಸಿಡಿಪಿಒ ಮಮ್ತಾಜ್ ಮಾತನಾಡಿ, ಬೆಳೆಯುವ ಹಂತದಲ್ಲೇ ಆಟಿಸಂ ಗುರುತಿಸುವಿಕೆ ಅಗತ್ಯವಾಗಿದ್ದು, ಇದು ಮುಂದಕ್ಕೂ ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಇದರ ಅರಿವು ಅಗತ್ಯವಾಗಿದೆ. ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಇತ್ತೀಚೆಗೆ ಕಡಿಮೆಯಾಗುತ್ತಿದೆ. ಹೀಗಾಗಿ ಇಂಥ ಮಾಹಿತಿ ನೀಡುವ ಕಾರ್ಯಕ್ರಮ ಸಾಮಾಜಿಕ ಜವಾಬ್ದಾರಿಯೂ ಹೌದು. ಮಕ್ಕಳ ಗುರುತಿಸುವಿಕೆಯಷ್ಟೇ ಅಲ್ಲ, ಅವರ ಪೋಷಣೆಯ ಕುರಿತು ಹೆತ್ತವರೂ ಅರಿತುಕೊಳ್ಳಬೇಕಾದ ಅಗತ್ಯವಿದೆ. ಇದರ ಕೊಂಡಿಯಾಗಿ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆ ಮಾಡುತ್ತಿದೆ. ಕಳೆದ ವರ್ಷ ತಾಯಿ ಮರಣ ಹೆರಿಗೆ ಸಂದರ್ಭ ಆಗಿಲ್ಲ. ಅಂಗನವಾಡಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಗೆ ಇದರ ಶ್ರೇಯಸ್ಸು ಸಲ್ಲುತ್ತದೆ ಎಂದರು.


ಯೇನಪೋಯ ಡೆಂಟಲ್ ಕಾಲೇಜಿನ ಡೀನ್ ಹಾಗೂ ಡೆಂಟಿಸ್ಟ್ರಿ ವಿಭಾಗದ ಪ್ರೊಫೆಸರ್ ಆಗಿರುವ ಡಾ ಶ್ಯಾಮ್ ಎಸ್ ಭಟ್ ಮಾತನಾಡಿ ದಿವ್ಯಾಂಗರಿಗೆ ವೆನ್ಲಾಕ್ ಶಿಫಾರಸು ಮೂಲಕ ಉಚಿತವಾಗಿ ಚಿಕಿತ್ಸೆ ದೊರಕುತ್ತದೆ. ಈ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದರು.
ಸಕ್ಷಮ ದ.ಕ ಜಿಲ್ಲಾ ಕಾರ್ಯದರ್ಶಿ ಹರೀಶ್ ಪ್ರಭು, ಸಂಸ್ಕಾರ ಭಾರತಿ ದ.ಕ. ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಮಾಜಿ ಅಧ್ಯಕ್ಷ ನಾರಾಯಣ ಸಿ. ಪೆರ್ನೆ, ವಿಕಾಸಂ ಸೇವಾ ಫೌಂಡೇಶನ್ ನ ಸಹಸಂಸ್ಥಾಪಕರಾದ ಧರ್ಮಪ್ರಸಾದ ರೈ ಉಪಸ್ಥಿತರಿದ್ದರು.
ಸಕ್ಷಮ ದಕ್ಷಿಣ ಕನ್ನಡದ ಭಾಸ್ಕರ ಹೊಸಮನೆ, ಲಯನ್ಸ್ ಕ್ಲಬ್ ನ ಸುನಿಲ್ ಬಿ, ಸಿವಿಲ್ ಕಾಂಟ್ರಾಕ್ಡರ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ಸತೀಶ್ ಜೋಗಿ, ಪ್ರಮುಖರಾದ ಅಶೋಕ್ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಬಂಟ್ವಾಳ ಅಧ್ಯಕ್ಷ ಎಂ.ರೋಹಿತಾಶ್ವ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.

ಅಂಗನವಾಡಿ ಕಾರ್ಯಕರ್ತೆಯರನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ವಿಕಾಸಂ ಸಹಸಂಸ್ಥಾಪಕ ಗಣೇಶ್ ಭಟ್ ವಾರಣಾಸಿ ತಿಳಿಸಿದರು. ವಿಕಾಸಂ ಸೇವಾ ಫೌಂಡೇಶನ್ ಸಹಸಂಸ್ಥಾಪಕ ಗೋಪಾಲ್ ಗೋವಿಂದತೋಟ ಸ್ವಾಗತಿಸಿದರು. ಮತ್ತೋರ್ವ ಸಹಸಂಸ್ಥಾಪಕರಾದ ಹರೀಶ್ ಜೋಗಿ ವಂದಿಸಿದರು. ಸುರೇಖಾ ಯಳವರ ಕಾರ್ಯಕ್ರಮ ನಿರ್ವಹಿಸಿದರು.
‘ಆಟಿಸಂ- ವರ್ತಮಾನ ಹಾಗೂ ಭವಿಷ್ಯ’ ಎನ್ನುವ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು. ಯೇನಪೋಯ ಡೆಂಟಲ್ ಕಾಲೇಜಿನ ಡೀನ್ ಹಾಗೂ ಡೆಂಟಿಸ್ಟ್ರಿ ವಿಭಾಗದ ಪ್ರೊಫೆಸರ್ ಆಗಿರುವ ಡಾ ಶ್ಯಾಮ್ ಎಸ್ ಭಟ್, ಹಾಗೂ ವಿಕಾಸಂ ಸೇವಾ ಫೌಂಡೇಶನ್ ನ ಸಹಸಂಸ್ಥಾಪಕ ಹಾಗೂ ಸಿ ಇ ಓ ಗಣೇಶ್ ಭಟ್ ವಾರಣಾಸಿ ಮಾತನಾಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!