ಪುತ್ತೂರು: “ನ್ಯಾಯ ಸಿಗದಿದ್ದರೆ ದೇವಸ್ಥಾನದ ಧ್ವಜಸ್ತಂಭದ ಮುಂದೆ ಪ್ರತಿಭಟನೆ” – ಸಂತ್ರಸ್ತೆಯ ತಾಯಿ ಎಚ್ಚರಿಕೆ

“ನನ್ನ ಮಗಳ ವಿಚಾರದಲ್ಲಿ ನ್ಯಾಯ ದೊರೆಯದಿದ್ದರೆ, ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಧ್ವಜಸ್ತಂಭದ ಮುಂದೆ ಕುಳಿತು ಪ್ರತಿಭಟನೆ ನಡೆಸುತ್ತೇನೆ” ಎಂದು ಸಂತ್ರಸ್ತೆಯ ತಾಯಿ ನಮಿತಾ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ . ಪುತ್ತೂರಿನ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ನಡೆದು ಒಂದು ವರ್ಷ ಕಳೆದಿದ್ದರೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಿ.ಜಿ. ಜಗನ್ನಿವಾಸ್ ರಾವ್ ಅವರು ಇಂದಿಗೂ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರುವುದನ್ನು ಅವರು ಪ್ರಶ್ನಿಸಿದರು.

“ನನ್ನ ಮಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಈ ಹಿಂದೆ ತಮ್ಮ ಮಗ ಕೃಷ್ಣ ಜೆ. ರಾವ್ ಮತ್ತು ಸಂತ್ರಸ್ತೆಯ ಮದುವೆ ನಡೆಸುವುದಾಗಿ ಭರವಸೆ ನೀಡಿದ್ದರು. ಮುಚ್ಚಳಿಕೆ ಪತ್ರವನ್ನೂ ಬರೆದು, ಮದುವೆಯ ಜವಾಬ್ದಾರಿ ನನ್ನದೇ ಎಂದು ತಿಳಿಸಿದ್ದಾರೆ. ಆದರೆ, ಒಂಬತ್ತು ತಿಂಗಳವರೆಗೆ ನಮ್ಮನ್ನು ದಾರಿ ತಪ್ಪಿಸಿದರು. ಈಗ ಮಗುವಿಗೆ 10 ತಿಂಗಳು ಆಗಿದ್ದರೂ ಮದುವೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, “ಇಲ್ಲಿವರೆಗೆ ಅವರ ಧಾರ್ಮಿಕ ಸೇವೆಗಳ ಬಗ್ಗೆ ನಾವು ಮೌನವಾಗಿದ್ದೇವೆ. ಆದರೆ ಇನ್ನು ಮುಂದೆ ಪಿ.ಜಿ. ಜಗನ್ನಿವಾಸ್ ರಾವ್ ಅವರನ್ನು ಯಾವುದೇ ಧಾರ್ಮಿಕ ಚಟುವಟಿಕೆಗಳಲ್ಲಿ ಸೇರಿಸಿಕೊಳ್ಳಬಾರದು” ಎಂದು ಸಾರ್ವಜನಿಕರಿಗೂ ಮನವಿ ಮಾಡಿದರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಿವಿಧ ಕಾರ್ಯಗಳಲ್ಲಿ ಅವರು ಮುಂಚೂಣಿಯಲ್ಲಿ ಭಾಗವಹಿಸುತ್ತಿದ್ದು, ಜಾತ್ರೋತ್ಸವದ ಗೊಣೆ ಮುಹೂರ್ತದಲ್ಲೂ ಸಕ್ರಿಯರಾಗಿದ್ದರು ಎಂದು ಅವರು ತಿಳಿಸಿದ್ದಾರೆ.

ಈ ಹಿನ್ನೆಲೆ, ಏಪ್ರಿಲ್ 10ರಂದು ನಡೆಯಲಿರುವ ಜಾತ್ರೋತ್ಸವದ ಧ್ವಜಾರೋಹಣದ ದಿನ, ದೇವಸ್ಥಾನದ ಧ್ವಜಸ್ತಂಭದ ಮುಂದೆ ಕುಳಿತು ನ್ಯಾಯಕ್ಕಾಗಿ ಬೇಡಿಕೆ ಇಡುವುದಾಗಿ ಎಚ್ಚರಿಕೆ ನೀಡಿದ್ದಾರೆ. “ತಂತ್ರಿಯವರಲ್ಲಿ ನ್ಯಾಯಕ್ಕಾಗಿ ಮನವಿ ಮಾಡುತ್ತೇನೆ. ದೇವರಲ್ಲದೇ ಇನ್ನು ಯಾರಿಂದಲೂ ನ್ಯಾಯ ಸಿಗುವ ನಿರೀಕ್ಷೆ ಇಲ್ಲ” ಎಂದು ಅವರು ಹೇಳಿದರು. “ಇಷ್ಟರವರೆಗೆ ಹಲವರನ್ನು ಬೇಡಿ ಮದುವೆ ಮಾಡಿಸಿಕೊಡಿ ಎಂದು ಕೇಳಿದ್ದೇನೆ. ಆದರೆ ಯಾರ ಮನಸ್ಸು ಕರಗಿಲ್ಲ. ಜಗನ್ನಿವಾಸ್ ರಾವ್ ಅವರು ಮದುವೆ ಮಾಡಿಸುತ್ತೇನೆಂದು ಹೇಳಿ ಈಗ ತಮ್ಮ ಮಗನನ್ನೇ ರಕ್ಷಿಸುತ್ತಿದ್ದಾರೆ. ಮೊದಲು ಹೆಣ್ಣುಮಗಳಿಗೆ ನ್ಯಾಯ ಸಿಗಬೇಕು” ಎಂದು ಅವರು ಒತ್ತಾಯಿಸಿದರು. ಒಟ್ಟಿನಲ್ಲಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗದಿದ್ದರೆ ಧಾರ್ಮಿಕ ಕೇಂದ್ರದ ಮುಂದೆಯೇ ಹೋರಾಟ ನಡೆಸುವುದಾಗಿ ಸಂತ್ರಸ್ತೆಯ ತಾಯಿ ಘೋಷಿಸಿದ್ದಾರೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!