ಉಡುಪಿ: ನೆಲ್ಯಾಡಿ ಮೂಲದ ಉದ್ಯಮಿ ಸುದೀಪ್ ರೈ ಅವರ ಆತ್ಮಹತ್ಯೆ ಪ್ರಕರಣ ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಗಳು ಬೆಳಕಿಗೆ ಬರುತ್ತಿವೆ. ಈ ನಡುವೆ ಸುದೀಪ್ ರೈ ಅವರ ಪತ್ನಿ ಸೌಮ್ಯ ಶೆಟ್ಟಿ ಮಾಧ್ಯಮಗಳ ಮುಂದೆ ಹಾಜರಾಗಿ ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೌಮ್ಯ ಶೆಟ್ಟಿ, ಸುದೀಪ್ ರೈ ಅವರ ತಂದೆ ಹಾಗೂ ವೇಣುಗೋಪಾಲ ಶೆಟ್ಟಿ ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದರು. “ನನ್ನ ವಿರುದ್ಧ ಕೇಳಿಬರುತ್ತಿರುವ ಹನಿ ಟ್ರ್ಯಾಪ್ ಆರೋಪಗಳು ಸಂಪೂರ್ಣ ಸುಳ್ಳು ಹಾಗೂ ನಿರಾಧಾರ. ನನ್ನ ವ್ಯಕ್ತಿತ್ವ ಹಾನಿ ಮಾಡಲು ಉದ್ದೇಶಪೂರ್ವಕವಾಗಿ ಈ ಆರೋಪಗಳನ್ನು ಮಾಡಲಾಗುತ್ತಿದೆ” ಎಂದು ಅವರು ಖಂಡಿಸಿದರು.
“ಸುದೀಪ್ ಅವರು ತಮ್ಮ ತಂದೆಯ ಮನೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಪ್ರಕರಣದಲ್ಲಿ ನನ್ನನ್ನು ಸಂಬಂಧಿಸುವುದು ನ್ಯಾಯಸಮ್ಮತವಲ್ಲ. ಪ್ರಕರಣದ ಎಲ್ಲ ಅಂಶಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಯಬೇಕು” ಎಂದು ಅವರು ಆಗ್ರಹಿಸಿದರು.
ವೇಣುಗೋಪಾಲ ಶೆಟ್ಟಿ ಕುರಿತು ಪ್ರತಿಕ್ರಿಯಿಸಿದ ಅವರು, “ಅವರು ನನ್ನ ವಿರುದ್ಧ ಪೂರ್ವಗ್ರಹದಿಂದ ಆರೋಪಗಳನ್ನು ಮಾಡುತ್ತಿದ್ದಾರೆ. ಅವರೊಂದಿಗೆ ಮದುವೆಯಾಗುವ ವಿಚಾರವನ್ನು ನಾನು ನಿರಾಕರಿಸಿದ್ದೆ. ಅವರು ಬೇರೆ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದ ವಿಚಾರ ನನಗೆ ತಿಳಿದಿತ್ತು. ಈ ಹಿನ್ನೆಲೆ ವೈಯಕ್ತಿಕ ದ್ವೇಷದಿಂದ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಲಾಗುತ್ತಿದೆ” ಎಂದು ಹೇಳಿದರು.
ಈ ಸಂಬಂಧ Karkala Police Stationನಲ್ಲಿ ಅಧಿಕೃತ ದೂರು ದಾಖಲಿಸಿರುವುದಾಗಿ ತಿಳಿಸಿದ ಅವರು, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಸಂಪೂರ್ಣ ವಿಷಯ ತಿಳಿಸಿ ನ್ಯಾಯಯುತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿರುವುದಾಗಿ ಹೇಳಿದರು.
“ನನ್ನ ಮೇಲೆ ಮಾಡಲಾಗುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಸೂಕ್ತ ತನಿಖೆ ನಡೆಸಿ ಸತ್ಯವನ್ನು ಬಹಿರಂಗಪಡಿಸಬೇಕು. ನನಗೆ ನ್ಯಾಯ ದೊರಕಬೇಕು” ಎಂದು ಸೌಮ್ಯ ಶೆಟ್ಟಿ ಒತ್ತಾಯಿಸಿದ್ದಾರೆ.