ಬಾಗಲಕೋಟೆ/ದಾವಣಗೆರೆ:
ರಾಜ್ಯದಲ್ಲಿ ನಡೆಯಲಿರುವ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸುವಂತೆ ಕರೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಪಿಜಿ ಗ್ಯಾಸ್ ಕೊರತೆಯಿಂದ ಹೋಟೆಲ್ಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಆಟೋ ಚಾಲಕರಿಗೂ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಅವರು ಆರೋಪಿಸಿದರು. “ಬಿಜೆಪಿ ಕಾರ್ಯಕರ್ತರೂ ಸಹ ಈ ಬೆಲೆ ಏರಿಕೆಯಿಂದ ಬೇಸತ್ತಿದ್ದಾರೆ. ಆದ್ದರಿಂದ ಈ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಮತ ಹಾಕಬೇಕು” ಎಂದು ಕರೆ ನೀಡಿದರು.
2014ರಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಸುಮಾರು ₹400 ಇದ್ದರೆ, ಈಗ ₹950 ದಾಟಿದೆ. ಪೆಟ್ರೋಲ್ ಬೆಲೆ ₹70ರಿಂದ ₹102ಕ್ಕೆ, ಡೀಸೆಲ್ ₹56ರಿಂದ ₹96ಕ್ಕೆ ಏರಿಕೆಯಾಗಿದೆ ಎಂದು ಹೇಳಿದರು. ಹೆದ್ದಾರಿ ಟೋಲ್ ದರಗಳ ಹೆಚ್ಚಳವೂ ಜನರಿಗೆ ಭಾರವಾಗಿದೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಕ್ಕಿಂತ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಕರ್ನಾಟಕಕ್ಕೆ ಬಾಕಿ ಇರುವ ತೆರಿಗೆ ಪಾಲು ಮತ್ತು ಅನುದಾನಗಳನ್ನು ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದರು. 15ನೇ ಹಣಕಾಸು ಆಯೋಗದ ಅನುದಾನ, ಜಲಜೀವನ್ ಮಿಷನ್ ಹಾಗೂ ಮಹಾದಾಯಿ ಯೋಜನೆಗೆ ಸಂಬಂಧಿಸಿದ ಅನುದಾನಗಳನ್ನು ಕೂಡ ತರುವಂತೆ ಆಗ್ರಹಿಸಿದರು.
ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರವಾಗಿದ್ದು, ಕ್ಷೇತ್ರದ ಮತದಾರರು ಅವರ ಸೇವೆಯನ್ನು ಸದಾ ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಸರ್ಕಾರವು ನೀಡಿದ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು, ಇದು ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು. “ಕಾಂಗ್ರೆಸ್ ಜನಪರ ಪಕ್ಷವಾಗಿದ್ದರೆ, ಬಿಜೆಪಿ ಕಾರ್ಪೊರೇಟ್ ಪರ ಪಕ್ಷವಾಗಿದೆ. ಅಂಬಾನಿ ಮತ್ತು ಅದಾನಿ ಹಿತಾಸಕ್ತಿಯೇ ಅವರಿಗೆ ಮುಖ್ಯ” ಎಂದು ಟೀಕಿಸಿದರು.
ಕುಟುಂಬ ರಾಜಕಾರಣದ ವಿಚಾರವಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳಲ್ಲಿಯೂ ಕುಟುಂಬ ರಾಜಕಾರಣವಿದೆ ಎಂದು ಆರೋಪಿಸಿದರು. “ಜನರ ಹಿತಕ್ಕಾಗಿ ಕೆಲಸ ಮಾಡುವ ಪಕ್ಷ ಕಾಂಗ್ರೆಸ್” ಎಂದು ಹೇಳಿದರು.