ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದಲ್ಲಿ 55ನೇ ಪ್ರತಿಷ್ಠಾ ಮಹೋತ್ಸವ ವೈಭವ

ಕಾಸರಗೋಡು:
ಜಿಲ್ಲೆಯ ಐತಿಹಾಸಿಕ ಚಂದ್ರಗಿರಿ ಕೋಟೆ ಪರಿಸರದಲ್ಲಿರುವ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ವೈಭವದಿಂದ ಜರಗಿತು.

ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ, ಕೀಕಾಂಗೋಡು ಪನ್ನಿಪಳ್ಳಿ ಬ್ರಹ್ಮಶ್ರೀ ಶ್ರೀಧರ ಕಾಯರ್ ತ್ತಾಯರ ನೇತೃತ್ವದಲ್ಲಿ, ಚಂದ್ರಗಿರಿ ಅವಿನಾಶ್ ಭಟ್ ಅವರ ಸಹಭಾಗಿತ್ವದಲ್ಲಿ ಕಾರ್ಯಕ್ರಮಗಳು ನೆರವೇರಿದವು. ಏಪ್ರಿಲ್ 3ರಿಂದ 5ರವರೆಗೆ ನಡೆದ ಈ ಮಹೋತ್ಸವದ ಅಂಗವಾಗಿ ಕುಲಪುರೋಹಿತರಾದ ನಾಗೇಶ್ ಭಟ್ ತಲ್ಲಾಣಿ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹರಿಸೇವೆ ಹಾಗೂ ಧರ್ಮದೈವಗಳ ಕೋಲ ಕಾರ್ಯಕ್ರಮಗಳು ಯಶಸ್ವಿಯಾಗಿ ಜರಗಿದವು.

ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರು ಹಾಗೂ ಕಾರ್ಯಕಾರ ವಿಷ್ಣುಮೂರ್ತಿ (ಕೊಪ್ಪಲು ಗುಳಿಗ), ರಕ್ತೇಶ್ವರಿ, ಗುರು ಬ್ರಹ್ಮ, ಕುಲನಾಗ ಮತ್ತು ಧೂಮಾವತಿ ಉಪದೇವತೆಗಳ ಆರಾಧನೆಗೆ ಪ್ರಸಿದ್ಧಿ ಪಡೆದ ಈ ದೇವಳಕ್ಕೆ ಕೇರಳ, ಕರ್ನಾಟಕ ಹಾಗೂ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸಿ ದರ್ಶನ ಪಡೆದರು.

ಮಹೋತ್ಸವದ ಅಂಗವಾಗಿ ನಡೆದ ವಿದ್ವತ್ ಸಭಾ ಕಾರ್ಯಕ್ರಮವನ್ನು ಬೆಂಗಳೂರಿನ ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ. ಬ್ರಿಜೇಶ್ ಕೆ. ಉದ್ಘಾಟಿಸಿ, “ಚಂದ್ರಗಿರಿ ಕೋಟೆ ಐತಿಹಾಸಿಕ, ಧಾರ್ಮಿಕ ಹಾಗೂ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಅಭಿವೃದ್ಧಿಯಾಗಲಿದೆ” ಎಂದು ಹೇಳಿದರು.

ದೇವಳ ಸಮಿತಿಯ ಅಧ್ಯಕ್ಷ ಕೆ. ಲೋಕೇಶ್ ಕೊಪ್ಪಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುರತ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಮೋದ್ ಕುಮಾರ್ ಪಿ., ಮಂಗಳೂರು ಅಬಕಾರಿ ಅಧೀಕ್ಷಕಿ ಶೋಭಾ ರಾಮಚಂದ್ರ, ಕೇರಳ ತೀಯ ಮಹಾಸಭಾದ ರಾಜ್ಯಾಧ್ಯಕ್ಷ ಗಣೇಶ ಆರಮಂಗಾನ, ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಶಿವರಾಮ ಕಾಸರಗೋಡು ಭಾಗವಹಿಸಿದರು.

ಈ ಸಂದರ್ಭದಲ್ಲಿ ದೇವಳದ ಗೌರವಾಧ್ಯಕ್ಷ ಪ್ರಭಾಕರ ಕೊಪ್ಪಲು, ಉಪಾಧ್ಯಕ್ಷ ಹಾಗೂ ಅಬಕಾರಿ ಇಲಾಖೆಯ ಜಿಲ್ಲಾ ಕಮಿಷನರ್ ಪ್ರಶಾಂತ ಕುಮಾರ್ ಕೊಪ್ಪಲು, ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ಅರ್ಚಕ ಸಿ.ಹೆಚ್. ದಯಾನಂದ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಹೋತ್ಸವದ ಅಂಗವಾಗಿ 75 ವರ್ಷ ಪೂರೈಸಿದ ಹಿರಿಯರನ್ನು ಸನ್ಮಾನಿಸಿ, ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮೂರು ದಿನಗಳ ಕಾಲ ಭಜನಾ, ದಾಸಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕಲಾವಿದರು ಭಾಗವಹಿಸಿ ಉತ್ಸವಕ್ಕೆ ಮೆರುಗು ನೀಡಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!