ಮಂಗಳೂರು: ಎಂಸಿಸಿ ಬ್ಯಾಂಕ್ 2025-26 ವಿತ್ತೀಯ ವರ್ಷದಲ್ಲಿ ರೂ. 13 ಕೋಟಿ ಲಾಭವನ್ನು ಗಳಿಸಿದೆ , ನಿವ್ವಳ ಎನ್‌ಪಿಎ ಇಳಿಕೆಗೆ ನಿರಂತರ ಪ್ರಯತ್ನ ನಡೆಸಿ, ಅದನ್ನು ಒಟ್ಟು ಮುಂಗಡಗಳ 1.25% ಮಟ್ಟಕ್ಕೆ ತಗ್ಗಿಸಲು ಯಶಸ್ವಿಯಾಗಿದೆ. ಒಟ್ಟು ವ್ಯವಹಾರ ರೂ.1525 ಕೋಟಿಗೆ ತಲುಪಿದ್ದು, 23% ವೃದ್ಧಿ ಸಾಧಿಸಿದೆ ಎಂದು ಎಂಸಿಸಿ ಬ್ಯಾಂಕ್ ಇದರ ಅಧ್ಯಕ್ಷರಾದ ಅನಿಲ್ ಲೋಬೊ ತಿಳಿಸಿದರು .
ಅವರು ಬ್ಯಾಂಕ್ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಈ ಬಾರಿ ಮಂಗಳೂರಿನ ದೇರಳಕಟ್ಟೆಯಲ್ಲಿ 22ನೇ ಶಾಖೆ ಹಾಗೂ ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ 23ನೇ ಶಾಖೆ ಆರಂಭಿಸಲು ಸಿದ್ಧತೆ. ಮುಂದಿನ ವರ್ಷಾಂತ್ಯಕ್ಕೆ ಶಾಖೆಗಳ ಸಂಖ್ಯೆ 25ಕ್ಕೆ ತಲಪುವ ಗುರಿಯ ಕಾರ್ಯ ಯೋಜನೆಯನ್ನು ಬ್ಯಾಂಕ್ ಈಗಾಗಲೇ ಹಾಕಿದೆ ಎಂದರು .
2018ರಲ್ಲಿ ನಾನು ಅಧಿಕಾರ ವಹಿಸಿಕೊಂಡ ಬಳಿಕ ಎಂಸಿಸಿ ಬ್ಯಾಂಕಿನ ಒಟ್ಟು ವ್ಯವಹಾರ ರೂ.500 ಕೋಟಿಯಿಂದ ಮೂರು ಪಟ್ಟು ಹೆಚ್ಚಳವನ್ನು ಕಂಡು ದಾಖಲೆ ನಿರ್ಮಿಸಿದೆ. 114 ವರ್ಷದ ಇತಿಹಾಸದಲ್ಲಿಯೇ ಇದು ಮಹತ್ವದ ಸಾಧನೆ ಎಂದು ತಿಳಿಸಿದರು .
ಬ್ಯಾಂಕಿನ ನೆಟ್ ವರ್ತ್ ರೂ.83.76 ಕೋಟಿಯಿಂದ ರೂ.91.80 ಕೋಟಿಗೆ ಏರಿಕೆಯಾಗಿ, ಠೇವಣಿಗಳು ಹಾಗೂ ಸಾಲಗಳ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲಾಗಿದೆ. ರೂ.285 ಕೋಟಿಗಳ ಹೆಚ್ಚುವರಿ ವ್ಯವಹಾರ ವಹಿವಾಟು ದೃಢ ಬೆಳವಣಿಗೆ ಮತ್ತು ಪರಿಣಾಮಕಾರಿ ತಂತ್ರಗಳ ಪ್ರತಿಫಲವಾಗಿದೆ. ಎನ್‌ಆರ್‌ಐ ಗ್ರಾಹಕರ ಬೆಂಬಲವೂ ಬೆಳವಣಿಗೆಗೆ ಕಾರಣವಾಗಿದೆ ಎಂದರು .
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ವ್ಯಾಪ್ತಿಯಿಂದ ಆರಂಭವಾದ ಬ್ಯಾಂಕ್ ಇದೀಗ ರಾಜ್ಯದಾದ್ಯಂತ ವಿಸ್ತರಿಸಿದೆ. ಪ್ರಸ್ತುತ ವರ್ಷದಲ್ಲಿ ಬೈಂದೂರು ಹಾಗೂ ಸಂತೆಕಟ್ಟೆಯಲ್ಲಿ ಹೊಸ ಶಾಖೆಗಳು ಆರಂಭವಾಗಿದ್ದು, ಕುಲಶೇಖರ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿ 7 ಹೊಸ ಎಟಿಎಂಗಳ ಸ್ಥಾಪನೆಯೊಂದಿಗೆ ಒಟ್ಟು ಎಟಿಎಂಗಳ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದರು .
ಮುಂದಿನ 2026-27ನೇ ಸಾಲಿನಲ್ಲಿ 4 ಹೊಸ ಶಾಖೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದ್ದು, ದೇರಳಕಟ್ಟೆ ಮತ್ತು ಕಟಪಾಡಿಯಲ್ಲಿ ಹೊಸ ಶಾಖೆಗಳಿಗೆ ಈಗಾಗಲೇ ಅನುಮತಿ ದೊರೆತಿದೆ. ಶಾಖೆಗಳ ಸಂಖ್ಯೆ ಶೀಘ್ರದಲ್ಲೇ 25ಕ್ಕೆ ಏರಿಕೆಯಾಗುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು .
ಬ್ಯಾಂಕಿನ ಮುಂದಿನ ಉದ್ದೇಶವನ್ನು ಅವರು ವಿವರಿಸುತ್ತಾ , ಜೂನ್ ಅಂತ್ಯದೊಳಗೆ ದೇರಳಕಟ್ಟೆ (ದಕ್ಷಿಣ ಕನ್ನಡ ಜಿಲ್ಲೆ) ಯಲ್ಲಿ 22ನೇ ಶಾಖೆ ಆರಂಭ , ಮಂಗಳೂರು (ಮೋರ್ಗನ್‌ಗೇಟ್) ಶಾಖೆಯನ್ನು ಜುಲೈ ಅಂತ್ಯದೊಳಗೆ ಸ್ಥಳಾಂತರ , ಆಗಸ್ಟ್ ಮೊದಲ ವಾರದಲ್ಲಿ ಕಟಪಾಡಿ (ಉಡುಪಿ ಜಿಲ್ಲೆ) ಯಲ್ಲಿ 23ನೇ ಶಾಖೆ ಆರಂಭ , ಕಾರ್ಕಳ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ , ಮೂಡಬಿದ್ರೆ ಶಾಖೆಯನ್ನು ಆಗಸ್ಟ್ ಅಂತ್ಯದೊಳಗೆ ನೆಲ ಮಹಡಿಗೆ ಸ್ಥಳಾಂತರ , ಮಾರ್ಚ್ ಅಂತ್ಯದೊಳಗೆ ವಾಮಂಜೂರಿನಲ್ಲಿ 24ನೇ ಶಾಖೆ ಆರಂಭ , ಮಾರ್ಚ್ ಅಂತ್ಯದೊಳಗೆ ಮಂಗಳೂರಿನಲ್ಲಿ ಸಿಲ್ವರ್ ಶಾಖೆ (25ನೇ ಶಾಖೆ) ಆರಂಭವಾಗಲಿದೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಜೆರಾಲ್ಡ್ ಜೂಡ್ ಡಿಸಿಲ್ವ , ನಿರ್ದೇಶಕರಾದ ಆಂಡ್ರೂ ಡಿಸೋಜಾ , ಡಾ| ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ , ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೊಜಾ, ಎಲೊಯ್ ಕಿರಣ್ ಕ್ರಾಸ್ಟೋ , ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜಾ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸುಶಾಂತ್ ಸಲ್ಡಾನಾ ಸಹಿತ ಮತ್ತಿತ್ತರು ಉಪಸ್ಥಿತರಿದ್ದರು .