ಉಡುಪಿ: ಜಿಲ್ಲೆಯಲ್ಲಿ ಆಟೋ ಗ್ಯಾಸ್ (ಎಲ್ಪಿಜಿ) ಕೊರತೆ ತೀವ್ರಗೊಂಡಿದ್ದು, ಆಟೋ ಚಾಲಕರಿಗೆ ಭಾರೀ ಸಂಕಷ್ಟ ಎದುರಾಗಿದೆ.
ಜಿಲ್ಲೆಯಾದ್ಯಂತ ಗ್ಯಾಸ್ ಸ್ಟಾಕ್ ಕೊರತೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೆಲವೆಡೆ ಸ್ವಲ್ಪ ಪ್ರಮಾಣದಲ್ಲಿ ಲಭ್ಯವಿದ್ದರೂ ದರ ಏರಿಕೆಯಿಂದ ಚಾಲಕರು ತಕರಾರು ವ್ಯಕ್ತಪಡಿಸುತ್ತಿದ್ದಾರೆ. ಉದ್ಯಾವರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಎಜೀಸ್ ಗ್ಯಾಸ್ ಏಜೆನ್ಸಿ ಹಲವು ದಿನಗಳಿಂದ ಬಂದ್ ಆಗಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.
ಹಿಂದೆ ಲೀಟರ್ಗೆ ಸುಮಾರು 60 ರೂ. ಇದ್ದ ಎಲ್ಪಿಜಿ ದರ ಇದೀಗ ದುಪ್ಪಟ್ಟಾಗಿ 105 ರೂ. ತಲುಪಿದೆ. ದರ ಏರಿಕೆಗೆ ವಿರೋಧ ಎದುರಾಗಬಹುದು ಎಂಬ ಕಾರಣದಿಂದ ಕೆಲ ಬಂಕ್ಗಳು ಸ್ಟಾಕ್ ಇದ್ದರೂ ತೆರೆಯದೇ ಇರುವ ಆರೋಪ ಕೇಳಿಬರುತ್ತಿದೆ.
80 ರೂ. ದರ ಏರಿಕೆಯಲ್ಲಿಯೇ ವಿರೋಧ ವ್ಯಕ್ತವಾಗಿದ್ದರೂ, ಈಗ 100 ರೂ. ಮೀರಿರುವುದರಿಂದ ಬಂಕ್ಗಳನ್ನು ತೆರೆಯುವ ವಿಚಾರದಲ್ಲಿ ಮಾಲೀಕರು ಗೊಂದಲದಲ್ಲಿದ್ದಾರೆ.
ಪೆಟ್ರೋಲ್ಗಿಂತಲೂ ಎಲ್ಪಿಜಿ ದರ ಹೆಚ್ಚಾಗಿದ್ದರೂ ಉತ್ತಮ ಮೈಲೇಜ್ ಕಾರಣಕ್ಕೆ ಆಟೋ ಚಾಲಕರು ಗ್ಯಾಸ್ ಮೇಲೆಯೇ ಅವಲಂಬಿತರಾಗಿದ್ದಾರೆ. ಆದರೆ ನಗರದಲ್ಲಿನ ಬಹುತೇಕ ಗ್ಯಾಸ್ ಬಂಕ್ಗಳು ಬಂದ್ ಆಗಿರುವುದರಿಂದ ಚಾಲಕರ ದಿನನಿತ್ಯದ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿದೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಚಾಲಕರು ಆಗ್ರಹಿಸಿದ್ದಾರೆ.