ಸುಳ್ಯ ಸಮೀಪ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದ ಘಟನೆ: ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ

ಸುಳ್ಯ ಸಮೀಪ ಪೆರಾಜೆ ಬಳಿಯ ಕಲ್ಚರ್ಪೆ ಎಂಬಲ್ಲಿ ಕಾಡಾನೆಯೊಂದು ಬಾವಿಗೆ ಬಿದ್ದ ಘಟನೆ ಸಂಭವಿಸಿತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ ನಡೆಸಿ ಬಾವಿಗೆ ಬಿದ್ದ ಕಾಡಾನೆಯನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಅಂದಾಜು 20 ವರ್ಷ ಪ್ರಾಯದ ಗಂಡಾನೆಯೊಂದು ಪೆರಾಜೆ ಸಮೀಪ ಕಲ್ಚರ್ಪೆ
ಯಲ್ಲಿ ಭಾನುವಾರ ರಾತ್ರಿ 11.30ರ ವೇಳೆಗೆ ತೆರೆದ ಬಾವಿಗೆ ಬಿದ್ದಿದೆ. ಕಾಡಿನಿಂದ ನಾಡಿಗೆ ಬಂದ ಆನೆಯು ಅರಣ್ಯದಂಚಿನ ತೋಟದ ಬದಿಯಲ್ಲಿರುವ ಪಾಳು ಬಿದ್ದ ಬಾವಿಗೆ ಆಯ ತಪ್ಪಿ ಬಿದ್ದಿದೆ. ಆನೆ ಘೀಳಿಡುವುದು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ರಾತ್ರಿಯೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಸೋಮವಾರ ಬೆಳಗ್ಗಿನಿಂದ ಆನೆಯ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು.ಸುಮಾರು 5-6 ಗಂಟೆಯ ಕಾರ್ಯಾಚರಣೆಯ ಬಳಿಕ ಆನೆಯನ್ನು ರಕ್ಷಣೆ ಮಾಡಿ ಕಾಡಿಗೆ ಅಟ್ಟಲಾಯಿತು. ಬಾವಿಯ ಒಂದು ಬದಿಯಿಂದ ಹಿಟಾಚಿ ಬಳಸಿ ಆಳ ಮಾಡಿ ರಾಂಪ್ ಮಾದರಿಯಲ್ಲಿ ದಾರಿ ಮಾಡಿ ಕೊಡಲಾಯಿತು. ಆನೆಯು ಆ ದಾರಿಯ ಮೂಲಕ ಮೇಲಕ್ಕೆ ಎತ್ತಲಾಯಿತ್ತು.

ಘೀಳಿಡುತ್ತಾ ಮೇಲಕ್ಕೆ ಬಂದ ಆನೆಯು ತೋಟದ ಕೆಳ ಭಾಗಕ್ಕೆ ವಸತಿ ಪ್ರದೇಶದತ್ತ ಓಡಿತು ಇದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟಾಕಿ ಸಿಡಿಸಿ ಆನೆಯನ್ನು ದೂರಕ್ಕೆ ಸರಿಸುವ ಪ್ರಯತ್ನ ನಡೆಸಿತು, ವಸತಿ ಪ್ರದೇಶದತ್ತ ಓಡಿದ ಆನೆ ಬಳಿಕ ಹಿಂತಿರುಗಿ ಬಂದು ಪೂಮಲೆ ಕಾಡಿನತ್ತ ಹೆಜ್ಜೆಯಿಟ್ಟಿತ್ತು. ಸುಮಾರು ೫ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಆನೆಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ಕಾಡಿಗೆ ಬಿಡಲಾಯಿತು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ವಿ. ಕರಿಕಾಲನ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಥೋನಿ ಮರಿಯಪ್ಪ, ಪ್ರೊಬೇಷನರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂಕೇತ್, ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಂತ್ ಕುಮಾರ್ ಪೈ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್ , ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ , ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಉಪವಲಯ ಅರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಅರಣ್ಯ ವೀಕ್ಷಕರು, ಆನೆ ಕಾರ್ಯಪಡೆ ಸಿಬ್ಬಂದಿಗಳು ಸೇರಿ ನೂರಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!