ಫಾದರ್ ಮುಲ್ಲರ್ ಚಾರಿಟೇಬಲ್ ಶಿಕ್ಷಣ ಸಂಸ್ಥೆಗಳ (ಎಫ್‌ಎಂಸಿಐ) ಪದವಿ ಪ್ರದಾನ ಸಮಾರಂಭ ಎ.16ರಿಂದ 18ರ ತನಕ ನಡೆಯಲಿದ್ದು, ಆರೋಗ್ಯ ಕ್ಷೇತ್ರದ 856 ಪದವೀಧರರರು ಆರೋಗ್ಯ ಸೇವೆಯ ಪ್ರತಿಜ್ಞೆ ಸ್ವೀಕರಿಸಲಿದ್ದಾರೆ ಎಂದು ಎಫ್‌ಎಂಸಿಐ ನಿರ್ದೇಶಕ ಫಾದರ್ ಫಾಸ್ಟಿನ್ ಲೂಕಾಸ್ ಲೋಬೊ ತಿಳಿಸಿದರು .
ಅವರು ಸಂಸ್ಥೆಯ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮಗಳ ಬಗ್ಗೆ ವಿವರಣೆಯನ್ನು ನೀಡಿದರು .
ಪದವಿ ಪ್ರದಾನ ಸಮಾರಂಭದಲ್ಲಿ ಸಾಂಪ್ರದಾಯಿಕ ಆಕ್ಸ್‌ಫರ್ಡ್ ಕ್ಯಾಪ್ ಅನ್ನು ಈ ವರ್ಷ ಕೈಬಿಡಲಾಗಿದೆ. ಇದರ ಬದಲಾಗಿ, ಪದವೀಧರರು ತಮ್ಮ ಕಾಲೇಜುಗಳನ್ನು ಪ್ರತಿನಿಧಿಸುವ ವಿಶೇಷವಾಗಿ ವಿನ್ಯಾಸಗೊಳಿಸಿದ ಸ್ಯಾಶ್ (ವಸ್ತ್ರ) ಧರಿಸಲಿದ್ದಾರೆ ಮತ್ತು ಫ್ರೇಮ್ ಮಾಡಿದ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮಗಳ ವಿವರವನ್ನು ತಿಳಿಸುತ್ತಾಳ , ಎ.16 ಮತ್ತು 17ನೇ ದಿನ ನಡೆಯುವ ಪದವಿ ಪ್ರದಾನ ಸಮಾರಂಭಗಳ ಅಧ್ಯಕ್ಷತೆ ಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಮತ್ತು ಎಫ್‌ಎಂಸಿಐ ಅಧ್ಯಕ್ಷ ವಂ. ಡಾ. ಪೀಟರ್ ಪಾಲ್ ಸಲ್ಡಾನಾ ವಹಿಸಲಿದ್ದಾರೆ.ಎಪ್ರಿಲ್ 18ರ ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ನಿವೃತ್ತ ಆರ್ಚ್ ಬಿಷಪ್ ಡಾ. ಬರ್ನಾರ್ಡ್ ಮೊರಾಸ್ ವಹಿಸಲಿದ್ದಾರೆ ಎಂದರು .
ಎ.16ರಂದು ಬೆಳಗ್ಗೆ 10:00 ಗಂಟೆಗೆ ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪದವೀಧರ ರಿಗೆ ಪದವಿ ಪ್ರದಾನ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಹೋಮಿಯೋಪತಿ ಆಯೋಗದ ಅಧ್ಯಕ್ಷ ಡಾ. ತಾರಕೇಶ್ವರ್ ಜೈನ್ ಮತ್ತು ಯೆನೆಪೋಯ (ಪರಿಗಣಿತ) ವಿವಿ ಉಪಕುಲಪತಿ ಡಾ. ಕೆ.ಎಸ್. ಗಂಗಾಧರ್ ಸೋಮಯಾಜಿ ಭಾಗವಹಿಸಲಿದ್ದಾರೆ . 19 ಸ್ನಾತಕೋತ್ತರ ಪದವೀಧರರು ಸೇರಿದಂತೆ ಒಟ್ಟು 111 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ. ಈ ವೇಳೆ ಅಧ್ಯಕ್ಷರ ಚಿನ್ನದ ಪದಕ ಮತ್ತು ಇತರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದರು .
ಎ.17ರಂದು 3:00 ಗಂಟೆಗೆ ವೈದ್ಯಕೀಯ, ಅಲೈಡ್ ಹೆಲ್ತ್ ಮತ್ತು ಫಿಸಿಯೋಥೆರಪಿ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಆರ್. ಪಾಟೀಲ್ ಹಾಗೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಡಾ. ಐರಾಣಿ ಮಹಮ್ಮದ್ ಖಾನ್ ಭಾಗವಹಿಸಲಿದ್ದಾರೆ. 22ನೇ ಎಂಬಿಬಿಎಸ್ ಬ್ಯಾಚ್‌ನ , ಫಿಸಿಯೋಥೆರಪಿ ಮತ್ತು ಅಲೈಡ್ ಹೆಲ್ತ್ ಸೈಯನ್ಸ್‌ನ ಒಟ್ಟು 518 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು .
ಎ.18ರಂದು ಮಧ್ಯಾಹ್ನ 3 ಗಂಟೆಗೆ ನರ್ಸಿಂಗ್ ಮತ್ತು ಸ್ಪೀಚ್ ಹಿಯರಿಂಗ್ ಕಾಲೇಜುಗಳ ಪದವಿ ಪ್ರದಾನ ಸಮಾರಂಭ ನಡೆಯಲಿದೆ.ಮುಖ್ಯ ಅತಿಥಿಗಳಾಗಿ ಮಣಿಪಾಲದ ಮಾಹೆ ವಿವಿಯ ಸಹಾಯಕ ಡೀನ್ ಡಾ. ವೆಂಕಟರಾಜ ಐತಾಳ್ ಮತ್ತು ಭುವನೇಶ್ವರದ ಏಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಆಶಾ ಪಿ. ಶೆಟ್ಟಿ. ಪಾಲ್ಗೊಳ್ಳಲಿದ್ದಾರೆ. ಕಾಲೇಜ್ ಮತ್ತು ಸ್ಕೂಲ್ ಆಫ್ ನರ್ಸಿಂಗ್‌ನ 177 ವಿದ್ಯಾರ್ಥಿಗಳು ಹಾಗೂ ಕಾಲೇಜ್ ಆಫ್ ಸ್ಪೀಚ್ ಆ್ಯಂಡ್ ಹಿಯರಿಂಗ್‌ನ 50 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಆಡಳಿತಾಧಿಕಾರಿಗಳಾದ ಡಾ. ಮೈಕೆಲ್ ಸಾಂತುಮಾಯೋರ್, ಫಾ. ಸಿಲ್ವೆಸ್ಟರ್ ವಿನ್ಸೆಂಟ್ ಲೋಬೊ, ಫಾ. ನೆಲ್ಸನ್ ಧೀರಜ್ ಪಾಯಸ್, ಫಾ. ಡೊನಾಲ್ಡ್ ನಿಲೇಶ್ ಕ್ರಾಸ್ತಾ, ಡೀನ್ ಡಾ. ಆಂಟನಿ ಸಿಲ್ವನ್ ಡಿ ಸೋಜ, ಪ್ರಾಂಶುಪಾಲರಾದ ಡಾ. ಶಿವಶಂಕರ ಎ.ಆರ್, ಪ್ರೊ. ಚರಿಷ್ಮಾ ಡಿಸಿಲ್ವ, ಭಗಿನಿ ಧನ್ಯಾ ದೇವಸಿಯಾ, ಪ್ರೊ. ಸಿಂಥಿಯಾ ಸಾಂತುಮಾಯೋರ್, ಡಾ. ಇ.ಎಸ್.ಜೆ. ಪ್ರಭು ಕಿರಣ್, ಡಾ. ಸತೀಶ್ ಎಸ್, ಡಾ. ಪೌಲಿನ್ ಆನಂದ್, ಎಫ್‌ಎಂಸಿಐ ಸಂಪರ್ಕಾಧಿಕಾರಿ ಡಾ. ಕೆಲ್ವಿನ್ ಪೀಟರ್ ಪಾಯಸ್, ಪೋರ್‌ವಿಂಡ್ಸ್‌ನ ಎಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು .