ಖಾಸಗಿ (ವೈಟ್ ಬೋರ್ಡ್) ವಾಹನಗಳಲ್ಲಿ ಶಾಲಾ ಮಕ್ಕಳನ್ನು ಸಾಗಿಸುವ ಹಾಗೂ ಬಾಡಿಗೆ ಆಧಾರದ ಮೇಲೆ ಬಳಸುತ್ತಿರುವ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂಘದ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲಾ ಮಕ್ಕಳನ್ನು ಸಾಗಿಸಲು ಮತ್ತು ಬಾಡಿಗೆಗೆ ಬಳಸಲು ಟೂರಿಸ್ಟ್ (ಯೆಲ್ಲೋ ಬೋರ್ಡ್) ವಾಹನಗಳಿಗೆ ಮಾತ್ರವೇ ಅವಕಾಶವಿದೆ. ನಮ್ಮ ಸಂಘದ ಸದಸ್ಯರು ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಆದರೆ, ಕೆಲವು ಚಾಲಕರು ಖಾಸಗಿ (ವೈಟ್ ಬೋರ್ಡ್) ವಾಹನಗಳಲ್ಲಿ ನಿಯಮ ಉಲ್ಲಂಘಿಸಿ ಮಕ್ಕಳನ್ನು ಸಾಗಿಸುತ್ತಿರುವುದು ಕಂಡುಬರುತ್ತಿದೆ ಎಂದು ಆರೋಪಿಸಿದರು.
ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕಾನೂನು ಉಲ್ಲಂಘಿಸುವ ಚಾಲಕರು ಮತ್ತು ಮಾಲೀಕರ ವಿರುದ್ಧ ತಕ್ಷಣ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಖಾಸಗಿ ವಾಹನ ಚಾಲಕರ ತಪ್ಪಿನಿಂದ ನಿಯಮ ಪಾಲಿಸುವವರಿಗೆ ಅನ್ಯಾಯವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಲ್ಲಿ ಖಾಸಗಿ ವಾಹನಗಳಲ್ಲಿ ಮಕ್ಕಳನ್ನು ಸಾಗಿಸುವ ಸಂದರ್ಭಗಳಲ್ಲಿ ಸಂಭವಿಸಿದ ಅಪಘಾತಗಳು ಹೃದಯವಿದ್ರಾವಕವಾಗಿವೆ. ಇಂತಹ ಘಟನೆಗಳ ನಡುವೆಯೂ ಮಂಗಳೂರು ಸೇರಿದಂತೆ ಹಲವೆಡೆ ನಿಯಮ ಉಲ್ಲಂಘನೆ ಮುಂದುವರಿದಿರುವುದು ಅಕ್ಷಮ್ಯ ಎಂದು ಹೇಳಿದರು.
ಸಂಘಟನಾ ಕಾರ್ಯದರ್ಶಿ ಲೋಕೇಶ್ ಮಾತನಾಡಿ, ಟೂರಿಸ್ಟ್ ವಾಹನಗಳ ಇನ್ಸೂರೆನ್ಸ್ ವೆಚ್ಚ ಹೆಚ್ಚಾಗಿದ್ದು, ವರ್ಷಕ್ಕೆ ಸುಮಾರು ರೂ.23,000 ಪಾವತಿಸಬೇಕಾಗುತ್ತದೆ. ಜೊತೆಗೆ ಸರ್ಕಾರದ ನಿಯಮಾನುಸಾರ ಪ್ಯಾನಿಕ್ ಬಟನ್ ಅಳವಡಿಸಲು ರೂ.14,000 ವೆಚ್ಚವಾಗುತ್ತದೆ. ಇವೆಲ್ಲವನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ಪ್ರತಿ ವರ್ಷ ತೆರಿಗೆ ಪಾವತಿ ಹಾಗೂ ವಾಹನ ತಪಾಸಣೆ ಕೂಡಾ ಮಾಡಿಸುತ್ತಿದ್ದೇವೆ ಎಂದು ತಿಳಿಸಿದರು.
ಆದರೆ ಖಾಸಗಿ ವಾಹನಗಳಲ್ಲಿ ಇಂತಹ ಯಾವುದೇ ಸುರಕ್ಷತಾ ವ್ಯವಸ್ಥೆಗಳಿಲ್ಲದೆ, ಇನ್ಸೂರೆನ್ಸ್ ಹಾಗೂ ತೆರಿಗೆ ಪಾವತಿಸದೆ ಮಕ್ಕಳನ್ನು ಬಾಡಿಗೆ ಆಧಾರದಲ್ಲಿ ಸಾಗಿಸುವುದು ಅಪರಾಧವಾಗಿದ್ದು, ಸರ್ಕಾರಕ್ಕೂ ನಷ್ಟ ಉಂಟುಮಾಡುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಸ್ಥಾಪಕ ಅಧ್ಯಕ್ಷರಾದ ಮೋಹನ್ ಕುಮಾರ್ ಅತ್ತಾವರ , ಸಂಘದ ಕಾರ್ಯಾಧ್ಯಕ್ಷರಾದ ಕಿರಣ್ ಲೇಡಿಹಿಲ್ , ಸದಸ್ಯರಾದ ಸತೀಶ್ ಪೂಜಾರಿ , ಹರೀಶ್ ಪೂಜಾರಿ ಸಹಿತ ಇನ್ನಿತ್ತರು ಉಪಸ್ಥಿತರಿದ್ದರು .