ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರುವಲ್ಲಿ ಮಹಿಳಾ ಪೊಲೀಸ್ ಠಾಣೆ ಬಳಿಯ ಹಳೆ ಕಟ್ಟಡ ತೆರವು ಮಾಡಿದ ವಿಚಾರದಲ್ಲಿ ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮತ್ತು ನ್ಯಾಯಾಲಯದ ಅನುಮತಿ ಪಡೆದು ಶಾಸಕರ ವಿರುದ್ಧ ಮಾಡಿರುವ ಕೇಸನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಎ.27ರಂದು ಸಂಜೆ ದೇವಳದ ಭಕ್ತ ಸಮೂಹ ಪುತ್ತೂರು ನಗರ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿ ಡಿವೈಎಸ್ಪಿ ಅವರಿಗೆ ಮನವಿ ಸಲ್ಲಿಸಿದರು. ಮನವಿಯ ಬಳಿಕ ಶಾಸಕ ಅಶೋಕ್ ಕುಮಾರ್ ರೈ ಅವರು ಠಾಣೆಗೆ ಆಗಮಿಸಿ ಡಿವೈಎಸ್ಪಿಯವರಲ್ಲಿ ಮಾತನಾಡಿದರು.
ಮನವಿ ಸಂದರ್ಭ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಹೇಮನಾಥ ಶೆಟ್ಟಿ ಕಾವು ಅವರು ಮಾತನಾಡಿ ಹಳೆ ಕಟ್ಟಡ ತೆರವು ಭಕ್ತರ ನಿರ್ಧಾರ. ಶಾಸಕರ ಮತ್ತು ದೇವಳದ ಅಧ್ಯಕ್ಷರ ಗಮನಕ್ಕೆ ಬಂದಾಗ ಅವರು ಭಕ್ತರನ್ನು ಸಮಾಧಾನಿಸಿದ್ದಾರೆ ಹೊರತು ಅವರು ಕಟ್ಟಡ ತೆರವುಗೊಳಿಸುವಲ್ಲಿ ನೇರವಾಗಿ ಭಾಗವಹಿಸಿದ್ದಾರೆ ಎಂಬುದು ಸುಳ್ಳು. ದೇವಳಕ್ಕೆ ಸಂಬಂಧಿಸಿ ಶಾಸಕರು ಅಬೂತಪೂರ್ವ ಕೆಲಸ ಮಾಡಿದ್ದಾರೆ. ಅದನ್ನು ಇಡಿ ಜಗತ್ತು ಒಪ್ಪಿದೆ. ಆದರೆ ಕಟ್ಟಡದ ವಿಚಾರದಲ್ಲಿ ಈ ರೀತಿಯ ಆರೋಪದ ಮಾತು ಬರುವುದು ಸರಿಯಲ್ಲ. ಅವರ ಮೇಲಿನ ಆರೋಪ ನಾವು ಒಪ್ಪುವುದಿಲ್ಲ. ಯಾವುದೇ ವಿಚಾರದಲ್ಲಿ ಕಾನೂನು ಮೀರಿ ಹೋಗುವ ಪ್ರಶ್ನೆಯೇ ಇಲ್ಲ. ಅದಕ್ಕೆ ಶಾಸಕರು ಗೌರವ ಕೊಡುತ್ತಾರೆ. ಹಳೆ ಕಟ್ಟಡದಿಂದ ಅನಾಹುತ ತಪ್ಪಿ ಹೋಗಲಿ ಎಂದು ಭಕ್ತ ಸಮೂಹದಿಂದ ಆಗಿರುವುದನ್ನು ಶಾಸಕರ ಮೇಲೆ ಆರೋಪ ಮಾಡುವ ಪೊಲೀಸರ ಕ್ರಮ ಸರಿಯಲ್ಲ. ಪುತ್ತೂರಿಗೆ ಮೆಡಿಕಲ್ ಕಾಲೇಜು ಸಹಿತ ಹಲವು ಅಭಿವೃದ್ದಿ ಕೆಲಸವನ್ನು ಶಾಸಕರು ಮಾಡಿದಾಗಲೂ ಜನರು ಅವರನ್ನು ಅಭಿನಂದಿಸಿದ್ದಾರೆ. ಅದೇ ರೀತಿ ಕಟ್ಟಡ ತೆರವು ಆದಾಗಲೂ ಅವರನ್ನು ಅಭಿನಂದಿಸಿದ್ದಾರೆ. ಹಾಗಾಗಿ ಶಾಸಕರ ಮೇಲೆ ಕ್ರಮ ಕೈಗೊಳ್ಳುವುದಿದ್ದರೆ ನಮ್ಮೆಲ್ಲರನ್ನು ಸೆರಿಸಿ ಕ್ರಮ ಕೈಗೊಳ್ಳಿ ಎಂದ ಅವರು ನಮಗೆ ಅವರ ಜಾಗ ಬೇಡ ಎಂಬುದನ್ನು ದೂರುದಾರರು ತಿಳಿದುಕೊಳ್ಳಲಿ. ಮುಂದಿನ ದಿನ ಇದನ್ನೇ ಗಂಭಿರವಾಗಿ ದೂರುದಾರರು ಮುಂದುವರಿಸಿದರೆ. ಭಕ್ತ ಸಮೂಹದ ಕೋಪ ಅನಾಹುತಗಳಿಗೆ ಕಾರಣ ಆಗಬಹುದು. ಪೊಲೀಸರು ಸತ್ಯಾಸತ್ಯೆಯನ್ನು ನೋಡಿ ಸೌಜನ್ಯಯುತವಾಗಿ ಸಮಸ್ಯೆ ಬಗೆ ಹರಿಸಿ. ನಾವು ಪ್ರತಿಭಟನರ ಮಾಡುತ್ತಿಲ್ಲ. ಧಿಕ್ಕಾರ, ಪ್ರತಿಭಟನೆ ಮಾಡುವುದು ನಮ್ಮ ಉದ್ದೇಶವಿಲ್ಲ. ನಮ್ಮ ಶಾಸಕರ ಮೇಲೆ ಆಗಲಿ ದೇವಳದ ಆಡಳಿತ ಮಂಡಳಿ ಮೇಲೆ ಆಗಲಿ ಸೂಕ್ಷ್ಮತೆಯನ್ನು ಪರಿಶೀಲಿಸಿ ನಮಗೆಲ್ಲರಿಗೂ ನ್ಯಾಯ ಮತ್ತು ರಕ್ಷಣೆ ನೀಡಿ ಎಂದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಠಾಣೆಯ ಮುಂದೆ ಜಮಾಯಿಸಿದ ಭಕ್ತರ ಬಳಿಗೆ ಬಂದು ಡಿವೈಎಸ್ಪಿ ಅವರ ಜೊತೆ ಮಾತನಾಡಿದರು.
ಉಳ್ಳಾಲ್ತಿ ಅಮ್ಮನವರು ಬರುವ ದಾರಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆ ಕಟ್ಟಡ ಅಪಾಯದ ಹಿನ್ನೆಲೆಯಲ್ಲಿ ಭಕ್ತರು ತೆರವು ಮಾಡಿದ್ದಾರೆ. ಈ ಕುರಿತು ನನ್ನ ಮತ್ತು ದೇವಳದ ಅಧ್ಯಕ್ಷರ ವಿರುದ್ಧ ಆರೋಪ ಮಾಡಲಾಗಿದೆ. ಆದರೆ ದೇವಳದ ಅಧ್ಯಕ್ಷರಿಗೆ ಬಂದಿರುವ ಬೆದರಿಕೆ ಕರೆಗೆ ದೂರು ದಾಖಲಾಗಿದೆ. ಇನ್ನು ಕಟ್ಟೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗೆ ಜಾತಿ ನಿಂಧನೆ ಮಾಡಿರುವ ಕುರಿತು ನೀಡಿದ ದೂರು ನೀವು ದಾಖಲಿಸಿಲ್ಲ. ಹಾಗಾಗಿ ಪೊಲೀಸ್ ಇಲಾಖೆ ಅವರ ಪರವಾಗಿದೆಯಾ ಎಂಬ ಸಂಶಯ ಭಕ್ತರಲ್ಲಿ ಹುಟ್ಟಿದೆ. ನನಗೂ ಬೇರೆ ಬೇರೆ ಬೆದರಿಕೆ ಕರೆ ಬಂದಿದೆ. ಇದೀಗ ಭಕ್ತರು ನೀಡಿದ ಮನವಿ ಸ್ವೀಕರಿಸಿ ನಮ್ಮ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ವಿರುದ್ಧ ಆಗಿರುವ ಕೇಸನ್ನು ವಾಪಾಸು ಪಡೆದುಕೊಳ್ಳಬೇಕು. ಕಾನೂನಿನಲ್ಲಿ ಈ ಅವಕಾಶ ಇದೆಯೇ ಇಲ್ಲವೋ ಎಂದು ನೀವು ನೋಡಬೇಕು. ಆದರೆ ಜಾತಿ ನಿಂದನೆ ನೀಡಿದ ದೂರನ್ನು ದಾಖಲಿಸಬೇಕು. ಇದರ ಜೊತೆಗೆ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದ ಕುರಿತು ನಗರಸಭೆಗೆ ವರದಿ ಮಾಡಿ. ಒಂದ ಕಟ್ಟಡ ದುರಸ್ಥಿ ಮಾಡಬೇಕು. ಇಲ್ಲಾಂದ್ರೆ ಅದಕ್ಕೆ ಸುತ್ತ ಬೌಂಡ್ರಿ ಹಾಕಬೇಕು. ಜನರು ಅಪಾಯಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದರು.
ಮನವಿಗೆ ಪೊಲೀಸ್ ಇಲಾಖೆಯಿಂದ ಭರವಸೆಯ ಸ್ಪಂಧನೆಗೆ ತಮ್ಮ ಮನವಿ ನೀಡಿದ್ದೇವೆ. ಅದಕ್ಕೆ ಪೊಲೀಸ್ ಇಲಾಖೆ ಭರವಸೆಯ ಸ್ಪಂಧನೆ ನೀಡಿದ್ದಾರೆ. ಒಬ್ಬರು ದೂರು ನೀಡಿರುವುದನ್ನು ದಾಖಲಿಸಬೇಕು. ಇನ್ನೊಂದು ನನ್ನ ಮತ್ತು ಈಶ್ವರ ಭಟ್ ಅವರ ಮೇಲಿನ ಕೇಸನ್ನು ಹಿಂದಕ್ಕೆ ಪಡೆಯಬೇಕೆಂದು ಬೇಡಿಕೆ ಇದೆ. ಅದಕ್ಕೆ ಅವರಿಗೆ ಅವಕಾಶ ಇದೆಯೋ ಇಲ್ಲವೋ ಗೊತ್ತಿಲ್ಲ. ಅಲ್ಲಿರುವ ಕಟ್ಟಡಕ್ಕೆ ಪೊಲೀಸ್ ವರದಿ ನೀಡಬೇಕು. ಈ ಕುರಿತು ಪೊಲೀಸರು ಭರವಸೆಯ ಸ್ಪಂಧನೆ ನೀಡಿದ್ದಾರೆ ಎಂದು ಪುತ್ತೂರು
ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಮಹಾಲಿಂಗೇಶ್ವರ ದೇವರ ಭಕ್ತರಾಗಿ ಆಗಮಿಸಿದ ಕೃಷ್ಣಪ್ರಸಾದ್ ಆಳ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಈಶ್ವರ ಭಟ್ ಪಂಜಿಗುಡ್ಡೆಯವರ ವಿರುದ್ಧ ಅನಾಮಿಕ ವ್ಯಕ್ತಿಗಳು ಸುಳ್ಳು ದೂರು ನೀಡಿರುವ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುವವರ ವಿರುದ್ಧ ನಾವು ಮನವಿ ಸಲ್ಲಿಸಲು ಬಂದಿದ್ದೇವೆ. ವಾಸ್ತವವಾಗಿ ಭಕ್ತರಿಂದಲೇ ತೆರವಾದ ಕಟ್ಟಡ. ಯಾಕೆಂದರೆ ಎಷ್ಟೋ ವರ್ಷದಿಂದ ಉಳ್ಳಾಲ್ತಿ ಅಮ್ಮನವರ ಕಿರುವಾಳು ಬರುವಾಗ ಅಲ್ಲಿ ಜಾಗ ಕಿರಿದಾಗಿ ತೊಂದರೆ ಆಗುತ್ತಿದೆ ಎಂದು ಭಕ್ತರು ಮನವಿ ಮಾಡಿದ್ದರು. ಈ ಕುರಿತು ದೂರದೃಷ್ಟಿತ್ವವುಳ್ಳ ಶಾಸಕರು ಮತ್ತು ಅಧ್ಯಕ್ಷರು ಅಲ್ಲಿನ ವ್ಯಾಪಾರಸ್ಥರಿಗೆ ಸೂಕ್ತ ಭದ್ರತೆ ನೀಡುವ ನಿಟ್ಟಿನಲ್ಲಿ ಅಲ್ಲಿನ ವ್ಯಾಪಾರಸ್ಥರಿಗೆ ಭದ್ರತೆ ನೀಡುವ ಆಶ್ವಾಸನೆ ನೀಡಿದ್ದರು. ಆದರೆ ದೇವಳದ ಕೆರೆಯ ಬಳಿ ಪಾಕಶಾಲೆಯ ನೆಲ ಸಮತಟ್ಟು ಮಾಡುವಲ್ಲಿ ಶಾಸಕರು ಜೆಸಿಬಿ ಹತ್ತಿ ತೆಗೆದಿರುವ ಪೊಟೋವನ್ನು ದುರುಪಯೋಗ ಪಡಿಸಿ ಸುಳ್ಳು ದೂರು ನೀಡಿದ್ದಾರೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಶಾಸಕರ ಮತ್ತು ಅಧ್ಯಕ್ಷರ ಮಾನಹಾನಿ ಮಾಡಿದ್ದಾರೆ. ಈ ಕುರಿತು ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಳ್ಳುವಂತೆ ನಾವೆಲ್ಲ ಮಹಾಲಿಂಗೇಶ್ವರ ದೇವರ ಭಕ್ತರು ಮನವಿ ಮಾಡುತ್ತಿದ್ದೇವೆ ಎಂದರು.
ಪುತ್ತೂರು ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಜಾನ್ಸನ್ ಡಿಸೋಜ, ಮಹಿಳಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮಹಾಲಿಂಗೇಶ್ವರ ದೇವರ ಭಕ್ತರಿಂದ ಪ್ರತಿಭಟನೆ ಎಂಬ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ಗೆ ಕ್ರಮಕೈಗೊಂಡಿದ್ದರು. ಸುಳ್ಯ, ಸುಬ್ರಹ್ಮಣ್ಯ, ಕಡಬದಿಂದಲೂ ಹೆಚ್ಚುವರಿ ಪೊಲೀಸ್ ಮತ್ತು 1 ಕೆಎಸ್ಆರ್ಪಿ ಬಸ್ ಅನ್ನು ಮುನ್ನೆಚ್ಚರಿಕೆ ಕ್ರಮವಾಗಿ ಬಂದೋಬಸ್ತ್ಗೆ ಕರೆಸಲಾಗಿತ್ತು. ಸಂಜೆ ವೇಳೆ ಎಲ್ಲರಿಗೂ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಾನ್ಸ್ನ್ ಡಿಸೋಜ ಅವರು ರೋಲ್ ಕಾಲ್ ಮಾಡಿದರು. ಭಕ್ತರು ಠಾಣೆಗೆ ಮುತ್ತಿಗೆ ಹಾಕದಂತೆ ಮತ್ತು ಠಾಣೆಯ ಒಳಗೆ ನುಗ್ಗದಂತೆ ಪೊಲೀಸ್ ಠಾಣೆಯ ಎದುರು ಬ್ಯಾರಿಕೇಡ್ ಅಳವಡಿಸಿದರು. ಸಂಜೆ ಗಂಟೆ 6ಕ್ಕೆ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಟ ಭಕ್ತರ ದಂಡು ಠಾಣೆಯ ಮುಂದೆ ಜಮಾಯಿಸಿ ನಮ್ಮದು ಪ್ರತಿಭಟನೆಯಲ್ಲ ಮನವಿ ನೀಡುವ ಉದ್ದೇಶ ಎಂದು ಹೇಳಿ ಮನವಿ ನೀಡಿದರು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶಿವಾನಾಥ ರೈ ಮೇಗಿನಗುತ್ತು, ಕೋಟಿಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿರಂಜನ ರೈ ಮಠಂತೆಬೆಟ್ಟು, ಮುರಳಿಧರ ರೈ ಮಠಂತಬೆಟ್ಟು, ರೋಶನ್ ರೈ ಬನ್ನೂರು, ಅಮರನಾಥ ಗೌಡ ಬಪ್ಪಳಿಗೆ, ದಾಮೋದರ್ ಭಂಡಾರ್ಕರ್, ಶಿವರಾಮ್ ಆಳ್ವ, ಶಿವರಾಮ ಪಕ್ಕಳ, ಸಂತೋಷ್ ಚಿಲ್ಮೆತ್ತಾರು, ಸನತ್ ರೈ ವಳತ್ತಡ್ಕ, ಮಂಜುನಾಥ್ ಕೆಮ್ಮಾಯಿ, ಯೋಗೀಶ್ ಸಾಮಾನಿ, ಲೋಕೇಶ್ ಪಡ್ಡಾಯೂರು, ರೋಹನ್ ರಾಜ್, ಉದಯ ಪಾಟಾಳಿ, ದೀಕ್ಷಿತ್ ರೈ, ಜಾನಕಿ ಮುರ, ಧರಣಿ ಕೆಯ್ಯೂರು, ಚಂದ್ರಪ್ರಭಾ ಗೌಡ, ವಿಕ್ರಂ ಶೆಟ್ಟಿ ಅಂತರ, ಶಿವಪ್ರಸಾದ್ ರೈ ಕೋಡಿಂಬಾಡಿ, ಪೂರ್ಣೇಶ್ ಭಂಡಾರಿ, ಜಯಪ್ರಕಾಶ್ ಬದಿನಾರು, ಸುಶಾಂತ್ ಶೆಟ್ಟಿ, ಸುಮಿತ್ ಶೆಟ್ಟಿ, ನವೀನ್ ರೈ ಬನ್ನೂರು, ಪೂರ್ಣಿಮ ಆರ್ಯಾಪು, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಗಿರೀಶ್ ಸೆಂಟ್ಯಾರ್, ಅಭಿಷೇಕ್ ಬೆಳ್ಳಿಪ್ಪಾಡಿ, ಪ್ರಸನ್ನ ಭಟ್ ಕೆದಿಲ,ನೇಸರ ಕಂಪ, ಅಕ್ರಮ ಸಕ್ರಮ ಸಮಿತಿ ಸದಸ್ಯೆ ರೂಪಲೇಖ ಆಳ್ವ, ಹರೀಶ್ ಬಂಗೇರ, ರಮೇಶ್ ರೈ ಡಿಂಬ್ರಿ ಮತ್ತಿತರರು ಮನವಿ ಸಂದರ್ಭ ಜಮಾಯಿಸಿದ್ದರು.