ಉಡುಪಿ: ಇತ್ತೀಚಿಗೆ ಕಾರ್ಕಳದಲ್ಲಿ ಸಂಚಲನ ಉಂಟುಮಾಡಿದ್ದ ಉದ್ಯಮಿ ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣದಲ್ಲಿ ನಟಿ ಸೌಮ್ಯ ಶೆಟ್ಟಿಗೆ ಜಾಮೀನು ನಿರಾಕರಣೆಯಾಗಿದೆ.
ಸುದೀಪ್ ಶೆಟ್ಟಿ ಆತ್ಮಹತ್ಯೆ ಸಂಬಂಧ ಪೊಲೀಸ್ ವಶದಲ್ಲಿದ್ದ ಆತನ ಪತ್ನಿ ಸೌಮ್ಯ ಶೆಟ್ಟಿಗೆ ಉಡುಪಿ ಸೆಶನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಮಾ. 22ರಂದು ಸುದೀಪ್ ಶೆಟ್ಟಿ ಆತ್ಮಹತ್ಯೆಗೆ ಶರಣಾಗಿದ್ದು, ಸಾವಿಗೆ ಸೌಮ್ಯ ಶೆಟ್ಟಿಯೇ ಕಾರಣ ಎಂದು ಸುದೀಪ್ ತಂದೆ ದಾಮೋದರ್ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸೌಮ್ಯ ಶೆಟ್ಟಿಯನ್ನು ಎ. 11ರಂದು ಉಡುಪಿಯಲ್ಲಿ ಪೊಲೀಸರು ಬಂಧಿಸಿದ್ದರು. ಬಳಿಕ ಜಾಮೀನಿಗಾಗಿ ಸೌಮ್ಯ ಶೆಟ್ಟಿ ಉಡುಪಿ ಸೆಸನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ ಜಾಮೀನು ನಿರಾಕರಿಸಿದೆ. ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ನೇತೃತ್ವದಲ್ಲಿ ತನಿಖೆ ನಡೆದಿದ್ದು, ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.