ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಗೇರು ಮೇಳ ಹಾಗೂ
ಕಾರ್ಯಾಗಾರ ಮೇ 17 ಮತ್ತು 18 ರಂದು ನಗರದ ಕದ್ರಿ ಪಾರ್ಕ್ ನಲ್ಲಿ ನಡೆಯಲಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು .
ಅವರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರ್ನಾಟಕ ಗೇರು ಮೇಳದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದ ವೇಳೆ ಮಾತನಾಡಿ , ರಾಜ್ಯ ಸರ್ಕಾರವು ಗೇರು ಕೃಷಿ ಉತ್ತೇಜನಕ್ಕಾಗಿ ₹25 ಲಕ್ಷ ವಿಶೇಷ ಅನುದಾನ ಬಿಡುಗಡೆ ಆಗಿದ್ದು ಇದು ಗೇರು ಕೃಷಿಯ ಉತ್ತೇಜನಕ್ಕೆ ಸಹಕಾರಿ ಆಗಲಿದೆ ಎಂದರು .
ಉಳ್ಳಾಲದಲ್ಲಿರುವ ಗೇರು ಕೃಷಿ ಮತ್ತು ಸಂಶೋಧನಾ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದ ವೇಳೆ ಗೇರು ಅಭಿವೃದ್ಧಿ ಕುರಿತು ದೊಡ್ಡ ಮಟ್ಟದ ಜಾಗೃತಿ ಕಾರ್ಯಕ್ರಮ ನಡೆಸುವ ಅಗತ್ಯವಿದೆ ಎಂದು ಮನವಿ ಮಾಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಗೇರು ಅಭಿವೃದ್ಧಿ ನಿಗಮ ಹಾಗೂ ಸರ್ಕಾರ, ಅರಣ್ಯ ಇಲಾಖೆಯ ಮೂಲಕ ₹25 ಲಕ್ಷ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರು.
“ಗೇರು ಕೃಷಿಗೆ ಈ ರೀತಿಯ ವಿಶೇಷ ಉತ್ತೇಜನ ದೊರಕುತ್ತಿರುವುದು ಇದೇ ಮೊದಲ ಬಾರಿ. ಕರಾವಳಿ ಭಾಗದ ಜನಜೀವನದೊಂದಿಗೆ ಗೇರು ಉದ್ಯಮಕ್ಕೆ ಅವಿನಾಭಾವ ಸಂಬಂಧವಿದೆ. ಹಿಂದಿನ ದಿನಗಳಲ್ಲಿ ಜಿಲ್ಲೆಯ ಸಾವಿರಾರು ಕುಟುಂಬಗಳು ಗೇರು ಕಾರ್ಖಾನೆಗಳಲ್ಲಿ ದುಡಿದು ಜೀವನ ಸಾಗಿಸಿವೆ,” ಎಂದು ಹೇಳಿದರು.
ಒಮ್ಮೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೀನುಗಾರಿಕೆ, ಓಡಿನ ಕಾರ್ಖಾನೆ, ಬೀಡಿ ಹಾಗೂ ಗೇರು ಉದ್ಯಮಗಳೇ ಪ್ರಮುಖ ಜೀವನಾಧಾರವಾಗಿದ್ದವು. ಹಿರಿಯರು ಗೇರು ಕಾರ್ಖಾನೆಗಳಲ್ಲಿ ದುಡಿದು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಬದುಕು ಕಟ್ಟಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.
ಗೇರು ಉತ್ಪನ್ನಗಳಿಗೆ ದೇಶೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದ್ದು, ಭಾರತವು ಆಫ್ರಿಕಾ ಸೇರಿದಂತೆ ಇತರ ದೇಶಗಳಿಂದ ಗೇರು ಬೀಜಗಳನ್ನು ಆಮದು ಮಾಡಿಕೊಂಡು ಸಂಸ್ಕರಿಸಿ ವಿದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ಹೇಳಿದರು.
ಗೇರು ಮೇಳದಲ್ಲಿ ಒಂದು ಸಾವಿರ ಗೇರು ಸಸಿ ವಿತರಣೆಯ ಕಾರ್ಯ ನಡೆಯಲಿದೆ ಎಂದರು .
ಈ ಸಂದರ್ಭದಲ್ಲಿ ರಾಜ್ಯ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ , ಗೇರು ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಲನ್ , ಅರಣ್ಯ ಸಂರಕ್ಷಣಾಧಿಕಾರಿ ಮಂಗಳೂರು ವೃತ್ತ ಡಾ ಕರಿಕಲನ್ , ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಕುಮಾರ್ ಸಹಿತ ಮುಂತಾದವರು ಉಪಸ್ಥಿತರಿದ್ದರು .