ಮಂಗಳೂರು: ನಗರದ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್‌ಮೆಂಟ್‌ನ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ (ಇಸಿಇ) ವಿಭಾಗವು ಸೆಮಿಕಂಡಕ್ಟರ್ ಆಧಾರಿತ ತಾಂತ್ರಿಕ ಶಿಕ್ಷಣಕ್ಕೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಅನ್ಮಯ ಟೆಕ್ನಾಲಜೀಸ್ ಸಂಸ್ಥೆಯೊಂದಿಗೆ ತಂತ್ರಜ್ಞಾನ ಸಹಭಾಗಿತ್ವದ ಒಪ್ಪಂದಕ್ಕೆ ಐತಿಹಾಸಿಕ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.
ಎಫ್‌ಪಿಜಿಎ ನೆಟಿವ್ ಹಾಗೂ ಎಂಬೆಡೆಡ್ ಹಾರ್ಡ್‌ವೇರ್ ಪರಿಹಾರಗಳಲ್ಲಿ ಪರಿಣತಿ ಹೊಂದಿರುವ ಅನ್ಮಯ ಟೆಕ್ನಾಲಜೀಸ್ ಜೊತೆಗಿನ ಈ ಒಪ್ಪಂದಕ್ಕೆ ಮೇ 21ರಂದು ಕಾಲೇಜು ಆವರಣದಲ್ಲಿ ಅಧಿಕೃತವಾಗಿ ಸಹಿ ಹಾಕಲಾಯಿತು.
ಈ ಸಂದರ್ಭದಲ್ಲಿ ಸಹ್ಯಾದ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ, ಇಸಿಇ ವಿಭಾಗದ ಮುಖ್ಯಸ್ಥರಾದ ಡಾ. ಅನುಷ್ ಬೇಕಲ್, ಅನ್ಮಯ ಟೆಕ್ನಾಲಜೀಸ್‌ನ ಸಿಇಒ ಹಾಗೂ ಸ್ಥಾಪಕರಾದ ಎನ್. ಜೆ. ಹರಿಪ್ರಸಾದ್, ಅಧ್ಯಾಪಕರು ಹಾಗೂ ವಿಭಾಗ ಸಲಹಾ ಸಮಿತಿ (ಡಿಎಸಿ) ಸದಸ್ಯರು ಉಪಸ್ಥಿತರಿದ್ದರು.
ಭಾರತ ಸರ್ಕಾರದ ರಾಷ್ಟ್ರೀಯ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ದೇಶದಲ್ಲಿ ಸೆಮಿಕಂಡಕ್ಟರ್ ಹಾಗೂ ಎಲೆಕ್ಟ್ರಾನಿಕ್ಸ್ ಪರಿಸರ ವೇಗವಾಗಿ ಬೆಳೆಯುತ್ತಿರುವ ಸಂದರ್ಭದಲ್ಲಿ ಈ ಒಪ್ಪಂದ ವಿಶೇಷ ಮಹತ್ವ ಪಡೆದುಕೊಂಡಿದೆ. ಜಾಗತಿಕ ಸೆಮಿಕಂಡಕ್ಟರ್ ಉದ್ಯಮವು 600 ಬಿಲಿಯನ್ ಡಾಲರ್ ಮೌಲ್ಯ ದಾಟುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳನ್ನು ಜಾಗತಿಕ ಸೆಮಿಕಂಡಕ್ಟರ್ ಉದ್ಯಮ ಮತ್ತು ಮುಂದಿನ ತಲೆಮಾರಿನ ಹಾರ್ಡ್‌ವೇರ್ ತಂತ್ರಜ್ಞಾನ ಕ್ಷೇತ್ರಗಳಿಗೆ ಸಜ್ಜುಗೊಳಿಸುವುದು ಈ ಸಹಭಾಗಿತ್ವದ ಪ್ರಮುಖ ಉದ್ದೇಶವಾಗಿದೆ.
ಈ ಒಪ್ಪಂದದ ಮೂಲಕ ಸೆಮಿಕಂಡಕ್ಟರ್ ತಂತ್ರಜ್ಞಾನ, ವಿಎಲ್‌ಎಸ್‌ಐ ವಿನ್ಯಾಸ, ಎಂಬೆಡೆಡ್ ಸಿಸ್ಟಮ್ಸ್, ಎಫ್‌ಪಿಜಿಎ ಅಭಿವೃದ್ಧಿ, ಎಐ ಹಾರ್ಡ್‌ವೇರ್ ಅಕ್ಸೆಲರೇಷನ್, ಎಡ್ಜ್ ಕಂಪ್ಯೂಟಿಂಗ್ ಹಾಗೂ ಮುಂದಿನ ತಲೆಮಾರಿನ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕೈಗಾರಿಕಾ ಸಂವಹನ, ತಾಂತ್ರಿಕ ಮಾರ್ಗದರ್ಶನ, ಇಂಟರ್ನ್‌ಶಿಪ್, ತಜ್ಞರ ಉಪನ್ಯಾಸ ಹಾಗೂ ಪ್ರಾಜೆಕ್ಟ್ ಆಧಾರಿತ ಕಲಿಕೆಯ ಅವಕಾಶಗಳು ದೊರೆಯಲಿವೆ.
ಈ ಸಹಭಾಗಿತ್ವವು ಸಹ್ಯಾದ್ರಿ ಕಾಲೇಜಿನಲ್ಲಿ ಇತ್ತೀಚೆಗೆ ಆರಂಭಗೊಂಡಿರುವ ಎಂ.ಟೆಕ್ ಇನ್ ವಿಎಲ್‌ಎಸ್‌ಐ ಡಿಸೈನ್ ಮತ್ತು ಎಂಬೆಡೆಡ್ ಸಿಸ್ಟಮ್ಸ್ ಕೋರ್ಸ್‌ಗೆ ಬಲ ತುಂಬಲಿದ್ದು, ಬಿಇ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೈಜ ಕೈಗಾರಿಕಾ ತಂತ್ರಜ್ಞಾನ ಅನುಭವವನ್ನು ಒದಗಿಸಲಿದೆ.
ಇದಕ್ಕೂ ಮುನ್ನ ಇಸಿಇ ವಿಭಾಗವು ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಸಹಯೋಗದಲ್ಲಿ ವಿಎಲ್‌ಎಸ್‌ಐ ಡಿಸೈನ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸಿ ಸೆಮಿಕಂಡಕ್ಟರ್ ಆಧಾರಿತ ಶಿಕ್ಷಣ ಮತ್ತು ಕೈಗಾರಿಕಾ ಕೌಶಲ್ಯಾಭಿವೃದ್ಧಿಗೆ ಬಲವಾದ ನೆಲೆಯನ್ನು ನಿರ್ಮಿಸಿದೆ. ಇದೀಗ ಅನ್ಮಯ ಟೆಕ್ನಾಲಜೀಸ್ ಜೊತೆಯ ಒಪ್ಪಂದವು ಎಫ್‌ಪಿಜಿಎ ಕಂಪ್ಯೂಟಿಂಗ್, ಎಐ ಅಕ್ಸೆಲರೇಷನ್, ಎಂಬೆಡೆಡ್ ಸಿಸ್ಟಮ್ಸ್ ಹಾಗೂ ಹೈ ಪರ್ಫಾರ್ಮೆನ್ಸ್ ಹಾರ್ಡ್‌ವೇರ್ ವಿನ್ಯಾಸ ಕ್ಷೇತ್ರಗಳಲ್ಲಿ ಇನ್ನಷ್ಟು ಪರಿಣತಿ ತಂದುಕೊಡಲಿದೆ.
ಅನ್ಮಯ ಟೆಕ್ನಾಲಜೀಸ್ ಸಂಸ್ಥೆ ಎಫ್‌ಪಿಜಿಎ ಆಧಾರಿತ ಉತ್ಪನ್ನ ಅಭಿವೃದ್ಧಿ, ಅತಿ ವೇಗದ ಗಣಕ ವ್ಯವಸ್ಥೆಗಳು, ಎಐ ಇನ್ಫರೆನ್ಸ್ ಅಕ್ಸೆಲರೇಷನ್, ರಿಯಲ್ ಟೈಮ್ ಸಿಗ್ನಲ್ ಪ್ರೊಸೆಸಿಂಗ್, ಎಂಬೆಡೆಡ್ ತಂತ್ರಜ್ಞಾನ, ಲೋ-ಲೇಟೆನ್ಸಿ ನೆಟ್ವರ್ಕಿಂಗ್, ರಕ್ಷಣಾ ಮತ್ತು ಏರೋಸ್ಪೇಸ್ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ಎಲ್ಲ ಉಪಕ್ರಮಗಳು ಭವಿಷ್ಯನಿರ್ಧಿಷ್ಟ ಸೆಮಿಕಂಡಕ್ಟರ್ ಪ್ರತಿಭಾ ವಲಯ ನಿರ್ಮಿಸುವ ಸಹ್ಯಾದ್ರಿಯ ದೃಷ್ಟಿಕೋನಕ್ಕೆ ಹೊಂದಿಕೊಂಡಿದ್ದು, ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಹಾಗೂ ಸುಧಾರಿತ ಎಲೆಕ್ಟ್ರಾನಿಕ್ಸ್ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಸಂಸ್ಥೆಯನ್ನು ರೂಪಿಸುವತ್ತ ಸಹಕಾರಿಯಾಗಲಿದೆ ಎಂದು ವಿಭಾಗ ತಿಳಿಸಿದೆ.
ನವೀನತೆ, ಸಂಶೋಧನೆ ಹಾಗೂ ಕೈಗಾರಿಕಾ ಆಧಾರಿತ ತಾಂತ್ರಿಕ ಶಿಕ್ಷಣವನ್ನು ಬಲಪಡಿಸುವ ದಿಶೆಯಲ್ಲಿ ಸಹಭಾಗಿತ್ವ ನೀಡಿದ ಅನ್ಮಯ ಟೆಕ್ನಾಲಜೀಸ್ ಸಂಸ್ಥೆಗೆ ಇಸಿಇ ವಿಭಾಗ ಕೃತಜ್ಞತೆ ಸಲ್ಲಿಸಿದೆ.