ಮಂಜೇಶ್ವರ: ಧರ್ಮದ ಹೆಸರಿನಲ್ಲಿ ಮತ ಕೇಳುವ, ಧಾರ್ಮಿಕ ಪ್ರಾರ್ಥನಾ ಮಂದಿರಗಳನ್ನು ಕೇಂದ್ರೀಕರಿಸಿ ರಾಜಕೀಯ ಚಟುವಟಿಕೆ ನಡೆಸುವ ಹಾಗೂ ಭೂ ಒತ್ತುವರಿ ಮತ್ತು ಭ್ರಷ್ಟಾಚಾರಕ್ಕೆ ಸಾಥ್ ನೀಡುವ ಮುಸ್ಲಿಂ ಲೀಗ್, ಬಿಜೆಪಿಗೆ ಉಪದೇಶ ನೀಡಲು ಬರಬೇಕಿಲ್ಲ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.

ಜೋಡುಕಲ್ಲಿನ ಶ್ರೀ ಗಣೇಶ ಚತುರ್ಥಿ ಆಚರಣಾ ಭೂಮಿಯಲ್ಲಿದ್ದ ಚಪ್ಪರವನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ ಯೂತ್ ಲೀಗ್, ಸಮಾಜದಲ್ಲಿ ಒಡೆದ ಆಳುವ ನೀತಿಯನ್ನು ಅನುಸರಿಸಲು ಯತ್ನಿಸಿದೆ. ಕಂದಾಯ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪುಗಳನ್ನು ಎಲ್ಲಾ ಧರ್ಮಗಳ ಸಂಸ್ಥೆಗಳು ಮತ್ತು ಪ್ರಾರ್ಥನಾ ಮಂದಿರಗಳ ವಿಷಯದಲ್ಲಿ ಒಂದೇ ರೀತಿಯಲ್ಲಿ ಜಾರಿಗೊಳಿಸಲು ಮುಸ್ಲಿಂ ಲೀಗ್ ನೇತೃತ್ವದ ಸ್ಥಳೀಯಾಡಳಿತ ಸಂಸ್ಥೆಗಳು, ರಾಜ್ಯ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆ ಸಿದ್ಧವಿದೆಯೇ ಎಂದು ಬಿಜೆಪಿ ಸವಾಲು ಹಾಕುತ್ತಿದೆ. ಹಿಂದೂ ಸಮುದಾಯದ ಸ್ಮಶಾನ ಭೂಮಿಯನ್ನೂ ಒತ್ತುವರಿ ಮಾಡಿದ ಘಟನೆಗಳಿವೆ. ಇಂತಹ ಒತ್ತುವರಿಗಳಿಗೆ ಮುಸ್ಲಿಂ ಲೀಗ್ ನೇತೃತ್ವವೇ ಬೆಂಬಲ ನೀಡುತ್ತಿದೆ.

ಮಂಜೇಶ್ವರ ಕುಂಚತ್ತೂರು ಮಾಡದ ಹಿಂದೂ ರುದ್ರಭೂಮಿಯ ಒತ್ತುವರಿ ತೆರವುಗೊಳಿಸಲು ಒಂದೂವರೆ ವರ್ಷದ ಹಿಂದೆ ಹೈಕೋರ್ಟ್ ಆದೇಶ ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ ಪೈವಳಿಕೆ ಪಂಚಾಯತ್‌ನಲ್ಲಿ ಶ್ರೀ ಗಣೇಶ ಚತುರ್ಥಿ ಆಚರಣೆ ನಡೆಯುವ ಸ್ಥಳದಲ್ಲಿ ನಿರ್ಮಿಸಲಾದ ಪಂದಲನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಅತಿಯಾದ ಉತ್ಸಾಹ ತೋರುತ್ತಿದ್ದಾರೆ. ಕಾನೂನು ಜಾರಿಗೊಳಿಸುವಲ್ಲಿ ಈ ರೀತಿಯ ತಾರತಮ್ಯ ಅಥವಾ ಇಬ್ಬಂದಿ ನೀತಿಯನ್ನು ಒಪ್ಪಲು ಸಾಧ್ಯವಿಲ್ಲ. ಅಧಿಕಾರಿಗಳು ಈ ಕ್ರಮದಿಂದ ಹಿಂದೆ ಸರಿಯದಿದ್ದರೆ, ಅಲ್ಪಸಂಖ್ಯಾತ ಸಮುದಾಯದ ವಶದಲ್ಲಿರುವ ಸರ್ಕಾರಿ ಭೂಮಿಯ ಅಕ್ರಮ ಒತ್ತುವರಿ ವಿರುದ್ಧ ಬಹುಸಂಖ್ಯಾತ ಸಮುದಾಯವು ಪ್ರಬಲವಾಗಿ ರಂಗಕ್ಕಿಳಿಯುವ ಸನ್ನಿವೇಶ ನಿರ್ಮಾಣವಾಗಲಿದೆ ಎಂದು ಅಶ್ವಿನಿ ಎಚ್ಚರಿಸಿದ್ದಾರೆ.

ಕೋಮುವಾದವನ್ನು ಪ್ರಚಾರ ಮಾಡಿ ಅದರ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿರುವುದು ಮುಸ್ಲಿಂ ಲೀಗ್. ಕಳೆದ ವಿಧಾನಸಭಾ ಚುನಾವಣೆಯಲ್ಲಸೇರಿ ಸ್ವಂತ ಕಾರ್ಯಕರ್ತರನ್ನು ಹಾಗೂ ಸಾರ್ವಜನಿಕ ಸಮಾಜವನ್ನು ಲೀಗ್ ಹೇಗೆ ದಾರಿ ತಪ್ಪಿಸಿದೆ ಎಂಬುದನ್ನು ಜನತೆ ನೋಡಿದ್ದಾರೆ.
ಪ್ರಧಾನಮಂತ್ರಿ ಆವಾಸ್ (ವಸತಿ) ಯೋಜನೆಗೆ ಸಂಬಂಧಿಸಿದ ಅಕ್ರಮಗಳು ಹೊರಬರುತ್ತಿದ್ದಂತೆ ಮಂಜೇಶ್ವರ ಬ್ಲಾಕ್ ಪಂಚಾಯತ್ ಆಡಳಿತ ನಡೆಸುತ್ತಿರುವ ಮುಸ್ಲಿಂ ಲೀಗ್ ರಕ್ಷಣಾತ್ಮಕ ಸ್ಥಿತಿಗೆ ತಳ್ಳಲ್ಪಟ್ಟಿದೆ. ಸಾಮಾನ್ಯ ಜನರ ಹಕ್ಕುಗಳು ಮತ್ತು ಸರ್ಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪಗಳಿಗೆ ಲೀಗ್ ನಾಯಕತ್ವ ಉತ್ತರಿಸಬೇಕು. ಸಾಮಾನ್ಯ ಜನರ ಹಣ ಮತ್ತು ಸರ್ಕಾರದ ಅನುದಾನವನ್ನು ಕಬಳಿಸಿ ನಾಯಕರು ಶ್ರೀಮಂತರಾಗುತ್ತಿರುವ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಶೀಲಿಸಬೇಕಾಗಿದೆ.

ಜೋಡುಕಲ್ಲು ವಿಷಯ, ಪ್ರಧಾನಮಂತ್ರಿ ವಸತಿ ಯೋಜನೆಯಲ್ಲಿನ ಅಕ್ರಮಗಳು, ಭೂ ಒತ್ತುವರಿ ಮುಂತಾದ ಜನಪ್ರಿಯ ವಿಷಯಗಳಲ್ಲಿ ಬಿಜೆಪಿ ಬಲವಾದ ಸಾರ್ವಜನಿಕ ಹೋರಾಟಗಳ ನೇತೃತ್ವ ವಹಿಸಲಿದೆ ಎಂದೂ ಎಂ.ಎಲ್. ಅಶ್ವಿನಿ ಎಚ್ಚರಿಸಿದ್ದಾರೆ.

