
ಮಂಗಳೂರು: ಮಕ್ಕಳಲ್ಲಿ ಓದುವ ಹವ್ಯಾಸ, ಸೃಜನಶೀಲತೆ, ಕಲ್ಪನಾಶಕ್ತಿ ಹಾಗೂ ಹೊಸ ಆಸಕ್ತಿಗಳನ್ನು ಬೆಳೆಸುವ ಉದ್ದೇಶದಿಂದ ‘ಮಂಗಳೂರು ಮಕ್ಕಳ ಸಾಹಿತ್ಯ ಉತ್ಸವ 2026’ ಅನ್ನು ನವೆಂಬರ್ 22ರಂದು ಕದ್ರಿ ಪಾರ್ಕ್‌ನಲ್ಲಿ ಆಯೋಜಿಸಲಾಗಿದೆ ಎಂದು ಹಕುನಾ ಮಟಾಟಾ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಅಂಜನಾ ಕಾಮತ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಕುನಾ ಮಟಾಟಾ ಎಡ್‌ವೆಂಚರ್ಸ್, ದಿ ಗ್ಲೋಯಿಂಗ್ ಕಾರ್ನರ್, ಯಂಗ್ ಇಂಡಿಯನ್ಸ್ ಹಾಗೂ ಮಂಗಳೂರು ಲೇಡೀಸ್ ಸರ್ಕಲ್ ಸಂಯುಕ್ತವಾಗಿ ಉತ್ಸವ ಆಯೋಜಿಸುತ್ತಿವೆ. 4ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ನಡೆಯುವ ಈ ಉತ್ಸವದಲ್ಲಿ ಸುಮಾರು 2,000 ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಕಥೆ, ಗೊಂಬೆಯಾಟ, ರಂಗಭೂಮಿ, ಚಿತ್ರಕಲೆ, ಮಣ್ಣಿನ ಕಲಾಕೃತಿ ತಯಾರಿಕೆ, ಕವನ ಹಾಗೂ ಸೃಜನಶೀಲ ಕಾರ್ಯಾಗಾರಗಳು ನಡೆಯಲಿವೆ. ಚೆನ್ನೈ, ಬೆಂಗಳೂರು, ಗುರುಗ್ರಾಮ್ ಮತ್ತು ಹೈದರಾಬಾದ್‌ನ ಖ್ಯಾತ ಲೇಖಕರು, ಕಲಾವಿದರು ಹಾಗೂ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಮಕ್ಕಳ ಜನಪ್ರಿಯ ಟಿಂಕಲ್ ತಂಡವೂ ವಿಶೇಷ ಕಾರ್ಯಾಗಾರಗಳನ್ನು ನಡೆಸಲಿದೆ ಎಂದು ತಿಳಿಸಿದರು.

ಶಿಕ್ಷಣವು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗದೆ, ಮಕ್ಕಳ ಪ್ರತಿಭೆ ಮತ್ತು ಆಸಕ್ತಿಗಳನ್ನು ಗುರುತಿಸಿ ಬೆಳೆಸುವ ವೇದಿಕೆಯಾಗಬೇಕು ಎಂಬುದು ಉತ್ಸವದ ಆಶಯವಾಗಿದೆ. ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಉತ್ಸವದ ಅಧಿಕೃತ ವೆಬ್‌ಸೈಟ್ ಉದ್ಘಾಟಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗ್ಲೋರಿಯಾ, ದಿವ್ಯಶ್ರೀ, ಶರಣ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

