ಯಕ್ಷಗಾನದ ಪವಿತ್ರತೆಗೆ ಧಕ್ಕೆ: ಅನಧಿಕೃತ ಚಿಕ್ಕಮೇಳಗಳ ವಿರುದ್ಧ ಕಠಿಣ ಕ್ರಮ

ಕರಾವಳಿಯ ಹೆಮ್ಮೆಯ ಗಂಡುಕಲೆ ಯಕ್ಷಗಾನದ ಪವಿತ್ರತೆಯನ್ನು ಹಾಳುಮಾಡಿ, ‘ಚಿಕ್ಕಮೇಳ’ಗಳ ಹೆಸರಿನಲ್ಲಿ ಹಣ ಸಂಪಾದನೆಯ ದಂಧೆ ನಡೆಸುವ ಅನಧಿಕೃತ ತಂಡಗಳ ವಿರುದ್ಧ ತೆಂಕುತಿಟ್ಟು ಸಣ್ಣ ಮೇಳಗಳ ಒಕ್ಕೂಟ ಕಠಿಣ ನಿಲುವು ತಾಳಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಒಕ್ಕೂಟದ ಅಧಿಕೃತ ಪರವಾನಗಿ ಇಲ್ಲದೆ ಯಾವುದೇ ಸಣ್ಣ ಮೇಳಗಳು ತಿರುಗಾಟ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಯಕ್ಷಗಾನದ ಜ್ಞಾನವಿಲ್ಲದವರು ತಂಡಗಳನ್ನು ಕಟ್ಟಿಕೊಂಡು ಕಲೆಯ ಘನತೆಗೆ ಧಕ್ಕೆ ತರುತ್ತಿದ್ದು, ಇಂತಹ ಚಟುವಟಿಕೆಗಳಿಗೆ ಸಾರ್ವಜನಿಕರು ಯಾವುದೇ ರೀತಿಯ ಬೆಂಬಲ ನೀಡಬಾರದು ಎಂದು ಮನವಿ ಮಾಡಿದರು.

ಮೇಳಗಳ ಪ್ರದರ್ಶನ ಸಮಯವನ್ನು ಸಂಜೆ 6ರಿಂದ ರಾತ್ರಿ 10.30ರವರೆಗೆ ಮಾತ್ರ ನಿಗದಿಪಡಿಸಲಾಗಿದ್ದು, ಈ ಅವಧಿಯನ್ನು ಮೀರಿ ಮನೆಮನೆಗೆ ತೆರಳುವುದು ಅಥವಾ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವುದು ನಿಷೇಧಿಸಲಾಗಿದೆ. ಒಂದೇ ಪ್ರದೇಶದಲ್ಲಿ ಹಲವು ಮೇಳಗಳ ಸಂಚಾರಕ್ಕೂ ನಿಯಂತ್ರಣ ವಿಧಿಸಲಾಗಿದೆ. ನಿಯಮ ಉಲ್ಲಂಘನೆ ಅಥವಾ ಅಸಭ್ಯ ವರ್ತನೆ ಕಂಡುಬಂದರೆ ಕಲಾಭಿಮಾನಿಗಳು ನೇರವಾಗಿ ಒಕ್ಕೂಟಕ್ಕೆ ದೂರು ನೀಡಬಹುದು ಎಂದು ತಿಳಿಸಿದರು.

ನವರಾತ್ರಿ, ದಸರಾ, ಗಣೇಶೋತ್ಸವ ಹಾಗೂ ಕೃಷ್ಣಾಷ್ಟಮಿ ಸಂದರ್ಭಗಳಲ್ಲಿ ಯಕ್ಷಗಾನದ ವೇಷಭೂಷಣ ಧರಿಸಿ ರಸ್ತೆ, ಅಂಗಡಿ ಮುಂಗಟ್ಟುಗಳಲ್ಲಿ ಭಿಕ್ಷಾಟನೆ ನಡೆಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಕ್ಷ ವೇಷಧಾರಿಗಳು ಭಿಕ್ಷೆ ಬೇಡುವುದು ಕಂಡುಬಂದರೆ ಸಾರ್ವಜನಿಕರು ಅವರನ್ನು ತಡೆದು ಪೊಲೀಸರಿಗೆ ಒಪ್ಪಿಸಬೇಕು ಎಂದು ಒಕ್ಕೂಟ ಕರೆ ನೀಡಿದೆ.

ಇಂತಹ ಚಟುವಟಿಕೆಗಳಿಗೆ ಸಹಕರಿಸುವ ವೇಷಭೂಷಣ ಬಾಡಿಗೆದಾರರು ಹಾಗೂ ಬಣ್ಣ ಹಚ್ಚುವವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಉಪಾಧ್ಯಕ್ಷರಾದ ರಮೇಶ್ ಕುಲಶೇಖರ ಮತ್ತು ಮೋಹನ ಕಲಂಬಾಡಿ, ಕೋಶಾಧಿಕಾರಿ ದಿವಾಕರ ದಾಸ್, ಕಾರ್ಯದರ್ಶಿ ಕಡಬ ದಿನೇಶ್ ರೈ, ಲೆಕ್ಕಪರಿಶೋಧಕ ಜಯಂತ್ ಕೆರೆಕಾಡು ಹಾಗೂ ಕಾನೂನು ಸಲಹೆಗಾರ ಮೋಹನದಾಸ್ ರೈ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!