ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ ಹಿಫ್‌ಝ್ ಸಾಧನೆಗೆ ಗೌರವ, ಶೈಕ್ಷಣಿಕ ವರ್ಷಕ್ಕೆ ಭಕ್ತಿಪೂರ್ಣ ಚಾಲನೆ

ಮಂಜೇಶ್ವರ, ಜೂನ್ 3: ರಾಷ್ಟ್ರವನ್ನು ಸರಿಯಾದ ಶಿಕ್ಷಣದ ಮೂಲಕ ಸಬಲಗೊಳಿಸುವ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕುಂಜತ್ತೂರಿನ ಪೀಸ್ ಕ್ರಿಯೇಟಿವ್ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಆರಂಭವು ಅರ್ಥಪೂರ್ಣ ಮತ್ತು ಭಕ್ತಿಪೂರ್ಣ ಕಾರ್ಯಕ್ರಮದೊಂದಿಗೆ ನೆರವೇರಿತು.

ಶಾಲೆಗೆ ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸುವ ಜೊತೆಗೆ, ಕುರ್‌ಆನ್ ಅನ್ನು ಸಂಪೂರ್ಣವಾಗಿ ಕಂಠಪಾಠ (ಹಿಫ್‌ಝ್) ಮಾಡಿದ ಇಬ್ಬರು ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಗುಣಮಟ್ಟದ ಶಿಕ್ಷಣದೊಂದಿಗೆ ಶೈಕ್ಷಣಿಕ ಚಟುವಟಿಕೆಗಳ ಮರುಆರಂಭದ ಸಂಭ್ರಮದಲ್ಲಿ ಈ ಸಾಧನೆ ವಿಶೇಷ ಮೆರಗು ನೀಡಿತು.

ಸಾಹುಲ್ ಹಮೀದ್–ರಜಿಯಾ ದಂಪತಿಗಳ ಪುತ್ರ ಹಾಫಿಲ್ ಮೊಹಿಯುದ್ದೀನ್ ಮಿಸಾಬ್ ಹಾಗೂ ಅಬ್ದುಲ್ ರಝಾಕ್–ನಬೀಸಾ ದಂಪತಿಗಳ ಪುತ್ರ ಹಾಫಿಲ್ ಅಬ್ದುಲ್ ನೌಫಲ್ ಅವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲಾ ಪ್ರಾಂಶುಪಾಲ ಅಬ್ದುಲ್ ಖಾದರ್, ದೀರ್ಘ ವಿರಾಮದ ನಂತರ ವಿದ್ಯಾರ್ಥಿಗಳು ಮರಳಿ ಶಾಲೆಗೆ ಬಂದಿರುವುದು ಸಂತೋಷದ ಸಂಗತಿಯಾಗಿದೆ. ಹಿಫ್‌ಝ್ ಎಂಬ ಮಹತ್ವದ ಸಾಧನೆ ಪೂರ್ಣಗೊಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುವುದು ಶಾಲೆಗೆ ಹೆಮ್ಮೆಯ ವಿಷಯ ಎಂದು ಹೇಳಿದರು.

ಕೋರ್ಡಿನೇಟರ್ ಝಕಿಯಾ ಬಾನು ಮಾತನಾಡಿ, “ಶಾಲೆ ಎಂದರೆ ಕೇವಲ ಕಟ್ಟಡವಲ್ಲ, ಅದು ಪ್ರತಿಭೆ ಅರಳಿಸುವ ತೋಟ. ವಿದ್ಯಾರ್ಥಿಗಳಿಲ್ಲದೆ ಶಾಲೆ ಮೌನವಾಗಿತ್ತು, ಈಗ ಅವರ ಆಗಮನದಿಂದ ಮತ್ತೆ ಚೈತನ್ಯ ಬಂದಿದೆ” ಎಂದು ತಿಳಿಸಿದರು.

ಬಳಿಕ ಹಾಫಿಝ್ ವಿದ್ಯಾರ್ಥಿಗಳು ಕುರ್‌ಆನ್‌ನ ಕೊನೆಯ ವಚನವನ್ನು ಓದಿ ಪೂರ್ಣಗೊಳಿಸಿದರು.

ಈ ಸಂದರ್ಭದಲ್ಲಿ ಶಾಲಾ ಚೇಯರ್‌ಮನ್ ಹಾಜಿ ಅಬ್ದುಲ್ ರಹ್ಮಾನ್ ಅರಿಮಲ, ಪ್ರಾಂಶುಪಾಲ ಅಬ್ದುಲ್ ಖಾದರ್, ಕೋರ್ಡಿನೇಟರ್‌ಗಳು, ಶಿಕ್ಷಕರು, ಪೋಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಆಡಳಿತ ಮಂಡಳಿ ಮತ್ತು ಶಿಕ್ಷಕರು ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ, ಅವರ ಸಾಧನೆ ಇತರರಿಗೆ ಸ್ಫೂರ್ತಿಯಾಗಲಿ ಎಂದು ಹಾರೈಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!