ರಾಜ್ಯಾದ್ಯಂತ ಖಾಸಗಿ ಬಸ್ ಪ್ರಯಾಣ ದರ ಏರಿಕೆ; ಜೂನ್ 9ರಿಂದ ಪರಿಷ್ಕೃತ ದರ ಜಾರಿ

ಉಡುಪಿ, ಜೂನ್ 8: ರಾಜ್ಯಾದ್ಯಂತ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಶೇ.5ರಿಂದ 8ರಷ್ಟು ಹೆಚ್ಚಿಸಲಾಗಿದ್ದು, ಪರಿಷ್ಕೃತ ದರವು ಜೂನ್ 9ರಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಖಾಸಗಿ ಮಜಲು ವಾಹನ ಬಸ್ ಮಾಲಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ತಿಳಿಸಿದ್ದಾರೆ.

ನಗರದ ಡಯಾನ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೀಸೆಲ್ ದರ ಏರಿಕೆ, ವಾಹನಗಳ ನಿರ್ವಹಣಾ ವೆಚ್ಚ, ಬಿಡಿಭಾಗಗಳ ಬೆಲೆ ಹಾಗೂ ನೌಕರರ ವೇತನ ಹೆಚ್ಚಳದಿಂದ ಬಸ್ ಉದ್ಯಮ ತೀವ್ರ ಆರ್ಥಿಕ ಒತ್ತಡಕ್ಕೆ ಸಿಲುಕಿದ್ದು, ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರವು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವುದರ ಜೊತೆಗೆ, ಕೇಂದ್ರ ಸರ್ಕಾರದ ಹಂತ ಹಂತದ ಬೆಲೆ ಏರಿಕೆಯಿಂದ ಡೀಸೆಲ್ ದರ ಗಣನೀಯವಾಗಿ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಟೈರ್ ರಿಸೋಲಿಂಗ್, ವಾಹನ ದುರಸ್ತಿ, ಬಿಡಿಭಾಗಗಳ ಖರೀದಿ ಹಾಗೂ ದೈನಂದಿನ ನಿರ್ವಹಣಾ ವೆಚ್ಚಗಳು ಏರಿಕೆಯಾಗಿವೆ ಎಂದು ಅವರು ವಿವರಿಸಿದರು.

ನೌಕರರ ವೇತನ, ವಿಮೆ, ರಸ್ತೆ ತೆರಿಗೆ ಸೇರಿದಂತೆ ವಿವಿಧ ಕಡ್ಡಾಯ ವೆಚ್ಚಗಳ ಹೆಚ್ಚಳದಿಂದ ಬಸ್ ಮಾಲಕರ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದ್ದು, ರಾಜ್ಯ ಸರ್ಕಾರದ 2020ರ ಅಧಿಸೂಚನೆ ಅನ್ವಯ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.

ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪ್ರಯಾಣ ದರ ರಿಯಾಯಿತಿ ಮುಂದುವರಿಯಲಿದ್ದು, ವಿದ್ಯಾರ್ಥಿಗಳ ಮೇಲೆ ಯಾವುದೇ ಹೆಚ್ಚುವರಿ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಯಾಣ ದರ ಪರಿಷ್ಕರಣೆ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಅದರ ಅನುಮೋದನೆಯ ಬಳಿಕವೇ ಹೊಸ ದರ ಜಾರಿಗೆ ತರಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಸದಾನಂದ ಚಾತ್ರ ಹಾಗೂ ಇತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!