ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಯುಡಿಎಫ್ ಅಭೂತಪೂರ್ವ ಜಯಭೇರಿ ಬಾರಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಎ.ಕೆ.ಎಂ ಅಶ್ರಫ್ ಅವರ ವಿಜಯೋತ್ಸವವು ಉಪ್ಪಳದಿಂದ ತೂಮಿನಾಡುವಿನವರೆಗೆ ಅತ್ಯಂತ ಅದ್ದೂರಿಯಾಗಿ ನಡೆಯಿತು.
ಕ್ಷೇತ್ರದ ಮಣ್ಣಿನಲ್ಲಿ ಬಿಜೆಪಿಗೆ ಸ್ಥಾನವಿಲ್ಲ ಎಂಬುದನ್ನು ಈ ಫಲಿತಾಂಶ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ. ಸತತ ಪರಿಶ್ರಮ ಮತ್ತು ಜನರ ಬೆಂಬಲದೊಂದಿಗೆ ಗೆಲುವು ಸಾಧಿಸಿರುವ ಎ.ಕೆ.ಎಂ ಅಶ್ರಫ್ ಅವರು ಈ ಬಾರಿ ಮಂತ್ರಿ ಸ್ಥಾನವನ್ನು ಅಲಂಕರಿಸಲು ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಮಂಜೇಶ್ವರದಿಂದ ಆರಂಭಗೊಂಡ ವಿಜಯೀ ಆಹ್ಲಾದ ಮೆರವಣಿಗೆಯು ತೂಮಿನಾಡುವಿನವರೆಗೆ ಸಾಗಿತು. ದಾರಿಯುದ್ದಕ್ಕೂ ನೂರಾರು ಕಾರ್ಯಕರ್ತರು, ಹಿತೈಷಿಗಳು ಮತ್ತು ಬೆಂಬಲಿಗರು ಪಾಲ್ಗೊಂಡು ಜಯಘೋಷಗಳನ್ನು ಕೂಗುತ್ತಾ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, “ಇದು ಕೇವಲ ವ್ಯಕ್ತಿಯ ಗೆಲುವಲ್ಲ, ಮಂಜೇಶ್ವರದ ಜನರ ಪ್ರೀತಿ ಮತ್ತು ವಿಶ್ವಾಸಕ್ಕೆ ಸಂದ ಜಯ,” ಎಂದು ಬಣ್ಣಿಸಿದರು. ಮೆರವಣಿಗೆಯಲ್ಲಿ ಯುಡಿಎಫ್ ಪ್ರಮುಖ ನಾಯಕರು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಭಾಗವಹಿಸಿದ್ದರು.