ಉಪ್ಪಳ : ಭೀಕರ ಕಡಲ್ಕೊರೆತದಿಂದ ಉಪ್ಪಳ ಪರಿಸರದ ಶಾರದಾನಗರದಿಂದ ಹನುಮಾನ್ ನಗರ, ಐಲ ಕಡಪ್ಪರ, ಪೆರಿಂಗಡಿ ವರೆಗಿನ 5ಕಿ.ಮೀ ಪ್ರದೇಶದ ಕಡಲ ತಡೆಗೋಡೆ ಸಹಿತ ಪುಲಿಮುಟ್ಟು ಸಮುದ್ರ ಕೊಚ್ಚಿ ಕೊಂಡೊಯ್ದು ಸುಮಾರು 400 ಕೂಟುಂಬಗಳ ಬದುಕಿನ ಭವಿಷ್ಯವೇ ಅತಂತ್ರ ಸ್ಥಿತಿಯಲ್ಲಿದೆ. ಇಡೀ ಪ್ರದೇಶವನ್ನು ಕಢಲುಆಕ್ರಮಿಸಿ, ರೌದ್ರ ತೆರೆಗಳೊಂದಿಗೆ ಮುನ್ನುಗ್ಗುತ್ತಿರುವ ಹಿನ್ನೆಲೆಯಲ್ಲಿ ಜನರು ಭೀತಿಯೊಂದಿಗೆ ಬದುಕುತ್ತಿದ್ದಾರೆ. ಈ ಪ್ರದೇಶಗಳಿಗೆ ಆದಿತ್ಯವಾರ ಸಂಜೆ ಸಿಪಿಎಂ ಸೆಕ್ರೇಟರಿಯೇಟ್ ಸದಸ್ಯ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಕೆ. ಆರ್. ಜಯಾನಂದ ನೇತೃತ್ವದ ನಿಯೋಗ ಭೇಟಿ ಇತ್ತು, ತಕ್ಷಣ ಪರಿಹಾರ ಪ್ರಕ್ರಿಯೆಯೊಂದಿಗೆ ಕಡಲತೀರ ನಿವಾಸಿಗಳ ಭದುಕಿಗೆ ಭದ್ರತೆ ನೀಡಬೇಕೆಂದು ಮೀನೂಗಾರಿಕಾ ಸಚಿವ ಸಜಿ ಚೆರಿಯಾನ್ ಅವರನ್ನುಒತ್ತಾಯಿಸಿದ್ದಾರೆ.
ಐಲ ಶಾರದಾನಗರ -ಪೆರಿಂಗಡಿ ಭಾಗದ ಕಡಲ ತೀರದಲ್ಲಿ ಈ ಹಿಂದೆಯೇ ವ್ಯಾಪಕ ಕಡಲ್ಕೊರೆತ ಊಂಟಾಗಿತ್ತು. ಈ ಸಮಸ್ಯೆ ಮನಗಂಡು ಈ ಪ್ರದೇಶದ ಕಡಲದಂಡೆಗೆ ಮೂರು ವರ್ಷಗಳ ಹಿಂದೆ ಕಗ್ಗಲ್ಲಿನ ತಡೆಗೋಡೆ ಕಟ್ಟಲಾಗಿತ್ತು. ಆದರೆ ಈ ಬಾರಿಯ ಮಳೆಯಬ್ಬರದ ಕಡಲಿನ ಉತ್ಕರ್ಷಕ್ಕೆ ತಡೆಗೋಡೆ ಸಮುದ್ರ ಪಾಲಾಗಿದೆ. ಮೀನುಗಾರಿಕೆಯನ್ನಷ್ಟೇ ಆಶ್ರಯಿಸಿ ಬದುಕುವ ಸುಮಾರು 400ಮನೆಗಳು ಈಪ್ರದೇಶದಲ್ಲಿದ್ದು, ಕಡಲು ರೊಚ್ಚಿಗೆದ್ದ ಹಿನ್ನೆಲೆಯಲ್ಲಿ ಮೀನುಗಾರಿಕೆ ಮಾಡಲಾಗದೇ ಅವರು ಆತಂಕ ಸ್ಥಿತಿಯಲ್ಲಿದ್ದಾರೆ.
2018ರಲ್ಲಿ ಕಾಸರಗೋಡು ಪ್ಯಾಕೇಜ್ ನಲ್ಲಿ 4ಕೋಟಿ 99ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ಕಣ್ಣಂಗಲ – ಕುರ್ಚಿಪಳ್ಳ, ಮಣಿಮುಂಡ ರಸ್ತೆಯೂ ಸಂಪೂರ್ಣ ಕುಸಿದು ನಾಶವಾಗಿದೆ. ಅಲ್ಲದೇ ನಬಾರ್ಡ್ ಸಹಾಯದಿಂದ ನಿರ್ಮಿಸಿದ ಹನುಮಾನ್ ನಗರ ರಸ್ತೆಯೂ ಸಮುದ್ರ ಪಾಲಾಗಿದೆ. ಈ ಪ್ರದೇಶದಲ್ಲಿ ಕಡಲು ವಿಪರೀತ ಉಕ್ಕೇರಿದೆ. 10ರಷ್ಟು ಮನೆಗಳು ಯಾವುದೇ ಕ್ಷಣ ಕಡಲಾಕ್ರಮಣಕ್ಕೆ ಬಲಿಯಾಗುವ ಸಾಧ್ಯತೆ ಇದೆ. ಮೀನುಗಾರರಿಗೆಂದೇ ನಿರ್ಮಿಸಲಾದ ಶೆಡ್ ಈಗಾಗಲೇ ಸಮುದ್ರ ಪಾಲಾಗಿದೆ. ಈ ಪರಿಸರದ ಮೀನುಗಾರರ ಸ್ಥಿತಿ ಈಗ ಆತಂಕದಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರ ಕುಟುಂಬಕ್ಕೆ ಉಚಿತ ರೇಶನ್ ಸಹಿತ ತುರ್ತು ನೆರವು ಒದಗಿಸಬೇಕೆಂದು ಅವರು ಜಿಲ್ಲಾಧಿಕಾರಿಗೆ ಮಾಹಿತಿ ಇತ್ತು ವಿನಂತಿಸಿದ್ದಾರೆ
ಈ ಪ್ರದೇಶಕ್ಕೆ ರಸ್ತೆ ನಿರ್ಮಾಣ, ನೂತನ ಶೆಡ್, ಶಾಶ್ವತ ತಡೆಗೋಡೆ ನಿರ್ಮಾಣ ಮಾಡಲು ಪ್ರತ್ಯೇಕ ಫಂಡ್ ಆಗತಾನೇ ಇರಿಸಿ ಮೀನುಗಾರಿಕೆ ಮತ್ತು ಬಂದರು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕೆ. ಆರ್. ಜಯಾನಂದ ಸಚಿವರನ್ನು ಸಂಪರ್ಕಿಸಿ ವಿನಂತಿಸಿದ್ದಾರೆ.
ಕಡಲ್ಕೊರೆತ ಪ್ರದೇಶ ಸಂದರ್ಶಿಸಿದ ನಿಯೋಗದಲ್ಲಿ ಸಿಪಿಐ ಎಂ ಉಪ್ಪಳ ಘಟಕ ಪ್ರಾದೇಶಿಕಕ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬೇಕೂರು,
ಸಾದಿಕ್ ಚೆರುಗೋಳಿ, ಹರೀಶ್ ಬೇರಿಕೆ, ಪ್ರವೀಣ್ ಬೇಕೂರು, ಮೊಗವೀರ ಪಟ್ಣ ದ ವಾರದ ಭಜನಾ ಸಮಿತಿ ಪದಾಧಿಕಾರಿಗಳಾದ ಜನಾರ್ಧನ ಸಾಲ್ಯಾನ್, ಪ್ರಶಾಂತ್ ಶಾರದಾನಗರ, ದೇವದಾಸ್, ಅಶೋಕ್ ಹಾಗೂ ಪರಿಸರದ ನಿವಾಸಿಗಳು ಪಾಲ್ಗೊಂಡಿದ್ದರು.