ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಅಂತ್ಯದ ಹಂತ ತಲುಪಿದ್ದು, ಉಭಯ ರಾಷ್ಟ್ರಗಳು ಜಿನೀವಾದಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲು ಸಿದ್ಧತೆ ನಡೆಸಿವೆ ಎಂದು ವರದಿಯಾಗಿದೆ.
ಈ ನಡುವೆ, ಯುದ್ಧಾನಂತರ ಹಾರ್ಮುಜ್ ಜಲಸಂಧಿಯನ್ನು ತನ್ನ ಇಚ್ಛೆಯಂತೆ ಬಂದ್ ಮಾಡುವ ಸಾಮರ್ಥ್ಯವನ್ನು ಇರಾನ್ ಪಡೆದುಕೊಂಡಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆಗಳು ಮೌಲ್ಯಮಾಪನ ಮಾಡಿರುವುದಾಗಿ ವರದಿಗಳು ತಿಳಿಸಿವೆ.
ಜಾಗತಿಕ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾದ ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ಪ್ರಭಾವ ಮುಂದುವರಿಯುವ ಸಾಧ್ಯತೆ ಇದ್ದು, ಇದು ಜಾಗತಿಕ ಇಂಧನ ಮಾರುಕಟ್ಟೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಇರಾನ್ ನೆರೆಯ ರಾಷ್ಟ್ರಗಳಲ್ಲಿರುವ ಅಮೆರಿಕದ ನೆಲೆಗಳ ಮೇಲೆ ದಾಳಿ ನಡೆಸುವ ಹಾಗೂ ಗಲ್ಫ್ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳ ಮೇಲೆ ಒತ್ತಡ ಹೇರಬಲ್ಲ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
“ಹಾರ್ಮುಜ್ ಜಲಸಂಧಿಯ ಮೇಲಿನ ಇರಾನ್‌ನ ನಿಯಂತ್ರಣವು ಯಾವುದೇ ಪರಮಾಣು ಬಾಂಬ್‌ಗಿಂತಲೂ ಹೆಚ್ಚು ಪ್ರಭಾವಶಾಲಿ ಆಯುಧವಾಗಬಹುದು” ಎಂದು ಮೂಲಗಳನ್ನು ಉಲ್ಲೇಖಿಸಿ ವರದಿಯಲ್ಲಿ ಹೇಳಲಾಗಿದೆ.
ಜಲಸಂಧಿಯ ಮೂಲಕ ಸಾಗಣೆ ಸಾಮಾನ್ಯ ಸ್ಥಿತಿಗೆ ಮರಳಿಸಲು ಅಮೆರಿಕವು ಇರಾನ್ ಜೊತೆ ತೀವ್ರ ಮಟ್ಟದ ಮಾತುಕತೆ ನಡೆಸಬೇಕಾಯಿತು ಎನ್ನಲಾಗಿದ್ದು, ಈ ಬೆಳವಣಿಗೆ ಮಧ್ಯಪ್ರಾಚ್ಯದ ಭದ್ರತೆ ಹಾಗೂ ಜಾಗತಿಕ ತೈಲ ವ್ಯಾಪಾರದ ಮೇಲೆ ಮಹತ್ವದ ಪರಿಣಾಮ ಬೀರಬಹುದು.