ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದ ಪರಿಣಾಮ ಬೈಕ್ಗೆ ಬೆಂಕಿ ಹೊತ್ತಿಕೊಂಡು ಯುವಕನೊಬ್ಬ ಸಜೀವ ದಹನಗೊಂಡು ಮೃತಪಟ್ಟ ಘಟನೆ ಮುಧೋಳ ತಾಲ್ಲೂಕಿನ ಸೋರಗಾಂವ ಗ್ರಾಮದ ಸಮೀಪ ನಡೆದಿದೆ.
ಮೃತ ಯುವಕನನ್ನು ಮುಧೋಳ ನಗರದ ಜನತಾ ಪ್ಲಾಟ್ ನಿವಾಸಿ ನವೀನ್ ಹನುಮಂತ ಗೊರ್ಕ್ (20) ಎಂದು ಗುರುತಿಸಲಾಗಿದೆ.
ಬಾದಾಮಿಯಿಂದ ಇಚಲಕರಂಜಿ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ಗೆ ತಕ್ಷಣ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಸಿಲುಕಿದ ಸವಾರ ನವೀನ್ ಸ್ಥಳದಲ್ಲೇ ಸಜೀವ ದಹನಗೊಂಡು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಧೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.