ಭೋವಿ ಸಮುದಾಯದವರು ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿ: ಪವನ್ ಕುಮಾರ್ ಶಿರ್ವ ಕರೆ

ಉಡುಪಿ, ಜೂನ್ 22: ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿರುವ ಭೋವಿ ಸಮುದಾಯದ ಸುಮಾರು 70 ಸಾವಿರಕ್ಕೂ ಅಧಿಕ ಜನರು ಜಾತಿ ಪ್ರಮಾಣ ಪತ್ರ ಪಡೆಯಲು ತಕ್ಷಣವೇ ಅರ್ಜಿ ಸಲ್ಲಿಸಬೇಕು ಎಂದು ಭೋವಿ ಸಮುದಾಯದ ಯುವ ಮುಖಂಡ ಪವನ್ ಕುಮಾರ್ ಶಿರ್ವ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಸುಮಾರು 300 ಗ್ರಾಮ ಪಂಚಾಯತ್‌ಗಳಲ್ಲಿ ವಾಸಿಸುವ ಭೋವಿ ಸಮುದಾಯದವರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಆಡಳಿತಾಧಿಕಾರಿ (ವಿ.ಎ.) ಕಚೇರಿಗೆ ತೆರಳಿ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಅರ್ಜಿಗಳು ತಹಶೀಲ್ದಾರ್ ಕಚೇರಿಗೆ ರವಾನೆಯಾಗಲಿದ್ದು, ಪರಿಶೀಲನೆಯ ಬಳಿಕ ಪ್ರಮಾಣ ಪತ್ರ ವಿತರಿಸಲಾಗುತ್ತದೆ ಎಂದರು.

ಒಂದು ವೇಳೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ಬಳಿಕವೂ ಅರ್ಜಿಯನ್ನು ತಿರಸ್ಕರಿಸಿದರೆ, ಅದಕ್ಕೆ ಸಂಬಂಧಿಸಿದ ಸ್ಪಷ್ಟ ಹಾಗೂ ಲಿಖಿತ ಕಾರಣವನ್ನು ಅಧಿಕಾರಿಗಳು ನೀಡಬೇಕು. ತಿರಸ್ಕೃತ ಆದೇಶದ ಪ್ರತಿಯನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವಂತೆ ಅವರು ಸಮುದಾಯದವರಿಗೆ ಸೂಚಿಸಿದ್ದಾರೆ.

ಸರಿಯಾದ ಕಾರಣಗಳಿಲ್ಲದೆ ಅರ್ಜಿಗಳನ್ನು ತಿರಸ್ಕರಿಸಿದಲ್ಲಿ ಅಥವಾ ನಿಯಮಾನುಸಾರ ಕ್ರಮ ಕೈಗೊಳ್ಳದಿದ್ದಲ್ಲಿ, ಸಂಬಂಧಿತ ದಾಖಲೆಗಳ ಆಧಾರದ ಮೇಲೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಆದ್ದರಿಂದ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಭೋವಿ ಸಮುದಾಯದ ಎಲ್ಲರೂ ಸೋಮವಾರದಿಂದಲೇ ಜಾತಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವಂತೆ ಹಾಗೂ ತಿರಸ್ಕಾರವಾದಲ್ಲಿ ಸಂಬಂಧಿತ ದಾಖಲೆಗಳನ್ನು ಮುಂದಿನ ಹೋರಾಟಕ್ಕಾಗಿ ಉಳಿಸಿಕೊಳ್ಳುವಂತೆ ಪವನ್ ಕುಮಾರ್ ಶಿರ್ವ ಮನವಿ ಮಾಡಿದ್ದಾರೆ.

ಭೋವಿ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ಪ್ರತಿಯೊಬ್ಬರೂ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!