ಮೈಸೂರು, ಐಪಿಎಲ್ ಕ್ರಿಕೆಟ್ನ ಪ್ರಭಾವದಿಂದ ಟಿ20 ಮಾದರಿಯ ಆಟದ ಬಗ್ಗೆ ಆಟಗಾರರ ಮನೋಭಾವದಲ್ಲಿ ಮಹತ್ವದ ಬದಲಾವಣೆ ಆಗಿದ್ದು, ಮುಂದಿನ ದಿನಗಳಲ್ಲಿ ದೇಶೀಯ ಟೂರ್ನಿಗಳಲ್ಲಿಯೂ ಇದೇ ಪ್ರವೃತ್ತಿ ಮುಂದುವರಿಯಲಿದೆ ಎಂದು ಕರಾವಳಿ ಕಿಂಗ್ಸ್ ಮಂಗಳೂರು ತಂಡದ ನಾಯಕ ಹಾಗೂ ಅನುಭವಿ ಬ್ಯಾಟರ್ ಕರುಣ್ ನಾಯರ್ ಅಭಿಪ್ರಾಯಪಟ್ಟಿದ್ದಾರೆ.
ಡಿಎಸಿಎಸ್ಎಸ್ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಟೂರ್ನಿಯ ವೇಳೆ ಮಾತನಾಡಿದ ಅವರು, ಆಧುನಿಕ ಟಿ20 ಕ್ರಿಕೆಟ್ ಆಟಗಾರರನ್ನು ಹೆಚ್ಚು ಆಕ್ರಮಣಕಾರಿ ಹಾಗೂ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ರೀತಿಯಲ್ಲಿ ಯೋಚಿಸಲು ಪ್ರೇರೇಪಿಸಿದೆ ಎಂದು ಹೇಳಿದರು.
“ಐಪಿಎಲ್ ಹೊಸ ಟ್ರೆಂಡ್ಗಳನ್ನು ಸೃಷ್ಟಿಸುತ್ತಿದೆ. ಈಗಿನ ಕಾಲಘಟ್ಟದಲ್ಲಿ ಆಟಗಾರರ ಯೋಚನಾ ವಿಧಾನ ಬದಲಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಎಲ್ಲ ಟೂರ್ನಿಗಳಲ್ಲಿಯೂ ಇದೇ ರೀತಿಯ ಕ್ರಿಕೆಟ್ ನೋಡಬಹುದು. ಆದರೆ ಐಪಿಎಲ್ನ ವಿಕೆಟ್ಗಳು, ವೇಗದ ಬೌಲರ್ಗಳು ಸೇರಿದಂತೆ ಹಲವು ಅಂಶಗಳು ವಿಭಿನ್ನವಾಗಿರುವುದರಿಂದ ಅದನ್ನು ಸಂಪೂರ್ಣವಾಗಿ ಅನುಕರಿಸುವುದು ಸುಲಭವಲ್ಲ. ಆದರೂ ಎಲ್ಲರ ಮನೋಭಾವ ಬದಲಾಗಿದೆ” ಎಂದು ಅವರು ತಿಳಿಸಿದರು.
ಈ ಬಾರಿಯ ಟೂರ್ನಿಯಲ್ಲಿ ಟಾಸ್ಗೂ ಮುನ್ನವೇ ಅಂತಿಮ ತಂಡದ ಪಟ್ಟಿಯನ್ನು ಸಲ್ಲಿಸಬೇಕಾದ ಹೊಸ ನಿಯಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಇದು ಆಲ್ರೌಂಡರ್ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ. ಟಾಸ್ಗೂ ಮುನ್ನವೇ ತಂಡವನ್ನು ನಿರ್ಧರಿಸಬೇಕಾಗಿರುವುದರಿಂದ ನಾಯಕರು ಮತ್ತು ತಂಡದ ನಿರ್ವಹಣಾ ವರ್ಗ ಹೆಚ್ಚು ಯೋಜಿತವಾಗಿ ಯೋಚಿಸಬೇಕಾಗುತ್ತದೆ” ಎಂದರು.
ಫ್ರೀ-ಹಿಟ್ ನಿಯಮದಲ್ಲಿ ಮಾಡಲಾದ ಬದಲಾವಣೆ ಕುರಿತು ಮಾತನಾಡಿದ ಅವರು, “ಫ್ರೀ-ಹಿಟ್ ವೇಳೆ ಬ್ಯಾಟರ್ ಕ್ಯಾಚ್ ಅಥವಾ ಬೌಲ್ಡ್ ಆದರೆ ರನ್ ಸಿಗದಿರುವುದು ಉತ್ತಮ ನಿರ್ಧಾರ. ಇದರಿಂದ ಆ ಎಸೆತದಲ್ಲಿಯೂ ರನ್ ಗಳಿಸಲು ಬ್ಯಾಟರ್ ಗಮನಹರಿಸಬೇಕಾಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಮಳೆಯಿಂದಾಗಿ ಕರಾವಳಿ ಕಿಂಗ್ಸ್ ಮಂಗಳೂರು ಮತ್ತು ಹುಬ್ಬಳ್ಳಿ ಟೈಗರ್ಸ್ ನಡುವಿನ ಉದ್ಘಾಟನಾ ಪಂದ್ಯ ರದ್ದಾಗಿದ್ದರೂ, ಮಹಾರಾಜ ಟ್ರೋಫಿ ಟೂರ್ನಿ ಕರ್ನಾಟಕದ ಆಟಗಾರರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅತ್ಯುತ್ತಮ ವೇದಿಕೆಯಾಗಿದೆ ಎಂದು ಕರುಣ್ ನಾಯರ್ ಹೇಳಿದರು.
“ಈ ಟೂರ್ನಿಯಲ್ಲಿ ಆಡುತ್ತಿರುವ ಪ್ರತಿಯೊಬ್ಬ ಆಟಗಾರನಿಗೂ ತಮ್ಮ ಸಾಮರ್ಥ್ಯ ತೋರಿಸಲು ಅವಕಾಶವಿದೆ. ನೀವು ಯಾರು ಎಂಬುದು ಮುಖ್ಯವಲ್ಲ, ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವುದು ಮುಖ್ಯ” ಎಂದು ಅವರು ಹೇಳಿದರು.
ಕರಾವಳಿ ಕಿಂಗ್ಸ್ ಮಂಗಳೂರು ತಂಡದ ನಾಯಕತ್ವದ ಕುರಿತು ಮಾತನಾಡಿದ ಅವರು, ತಂಡದಲ್ಲಿ ಹಿರಿಯ-ಕಿರಿಯ ಎಂಬ ಭೇದಭಾವ ಇಲ್ಲ ಎಂದು ಸ್ಪಷ್ಟಪಡಿಸಿದರು.
“ನಮ್ಮ ತಂಡದಲ್ಲಿ ಯಾರೂ ಹಿರಿಯರಲ್ಲ, ಕಿರಿಯರೂ ಅಲ್ಲ. ಎಲ್ಲರೂ ತಂಡದ ಭಾಗವಾಗಿದ್ದು, ಪ್ರತಿಯೊಬ್ಬರಿಗೂ ತಮ್ಮದೇ ಆದ ಜವಾಬ್ದಾರಿ ಇದೆ. ನಮ್ಮ ತಂಡದಲ್ಲಿ ಸಾಕಷ್ಟು ಯುವ ಆಟಗಾರರಿದ್ದು, ಕೆಲ ಅನುಭವಿ ಆಟಗಾರರು ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಯುವ ಪ್ರತಿಭೆಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸುವುದೇ ನಮ್ಮ ಗುರಿ” ಎಂದು ತಿಳಿಸಿದರು.
“ಕರ್ನಾಟಕ ಕ್ರಿಕೆಟ್ಗೆ ಇದು ಅತ್ಯಂತ ಉತ್ಸಾಹಭರಿತ ಕಾಲಘಟ್ಟವಾಗಿದೆ. ಈ ಟೂರ್ನಿಯ ಮೂಲಕ ಅನೇಕ ಯುವ ಪ್ರತಿಭೆಗಳು ಹೊರಹೊಮ್ಮಲಿದ್ದು, ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದೆ” ಎಂದು ಕರುಣ್ ನಾಯರ್ ಹೇಳಿದರು.