ಆಳ ಸಮುದ್ರದಲ್ಲಿ ಭಾರತೀಯ ತಟರಕ್ಷಣಾ ಪಡೆಯ ಸಾಹಸ ಕಾರ್ಯಾಚರಣೆಮುಳುಗುತ್ತಿದ್ದ ಮೀನುಗಾರಿಕಾ ಬೋಟ್‌ನಲ್ಲಿದ್ದ ಆರು ಮೀನುಗಾರರ ರಕ್ಷಣೆ

ಮಂಗಳೂರು, ಜೂನ್ 30: ಭಾರತೀಯ ತಟರಕ್ಷಣಾ ಪಡೆ (ಇಂಡಿಯನ್ ಕೋಸ್ಟ್ ಗಾರ್ಡ್) ಆಳ ಸಮುದ್ರದಲ್ಲಿ ಅತ್ಯಂತ ಸವಾಲಿನ ರಕ್ಷಣಾ ಕಾರ್ಯಾಚರಣೆ ನಡೆಸಿ ಅಪಾಯಕ್ಕೆ ಸಿಲುಕಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಉಡುಪಿಯ ‘ಮಂಜು ಮಾತಾ’ ಹೆಸರಿನ ಮೀನುಗಾರಿಕಾ ಬೋಟ್ ಕರಾವಳಿಯಿಂದ ಸುಮಾರು 33 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್‌ನ ತಳಭಾಗಕ್ಕೆ ಹಾನಿಯಾಗಿದ್ದು, ಸಮುದ್ರದ ನೀರು ಬೋಟ್‌ನೊಳಗೆ ನುಗ್ಗಲಾರಂಭಿಸಿತ್ತು. ಪರಿಣಾಮ ಬೋಟ್ ಮುಳುಗುವ ಹಂತ ತಲುಪಿದ್ದು, ಅದರಲ್ಲಿದ್ದ ಆರು ಮಂದಿ ಮೀನುಗಾರರು ತುರ್ತು ಪರಿಸ್ಥಿತಿಗೆ ಸಿಲುಕಿದ್ದರು.

ಬೋಟ್‌ನಿಂದ ಕಳುಹಿಸಲಾದ ತುರ್ತು ಸಂದೇಶವನ್ನು ಸ್ವೀಕರಿಸಿದ ಭಾರತೀಯ ತಟರಕ್ಷಣಾ ಪಡೆಯ ಐಸಿಜಿ ಸಚೇತ್ (ICG Sachet) ನೌಕೆ ತಕ್ಷಣವೇ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿತು.

ಸುಮಾರು 90 ನಿಮಿಷಗಳ ಕಾಲ ಪ್ರತಿಕೂಲ ಹವಾಮಾನ ಮತ್ತು ಪ್ರಕ್ಷುಬ್ಧ ಸಮುದ್ರದ ನಡುವೆಯೂ ತಟರಕ್ಷಣಾ ಪಡೆಯ ಸಿಬ್ಬಂದಿ ಅತ್ಯಂತ ಸಾಹಸದಿಂದ ಕಾರ್ಯಾಚರಣೆ ನಡೆಸಿ, ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ಅನ್ನು ಪತ್ತೆಹಚ್ಚಿದರು. ಬಳಿಕ ರಿಮೋಟ್-ಆಪರೇಟೆಡ್ ಲೈಫ್‌ಬಾಯ್‌ಗಳ ನೆರವಿನಿಂದ ಬೋಟ್‌ನಲ್ಲಿದ್ದ ಆರು ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಯಿತು.

ಭಾರತೀಯ ತಟರಕ್ಷಣಾ ಪಡೆಯ ಸಮಯೋಚಿತ ಸ್ಪಂದನೆ ಹಾಗೂ ದಿಟ್ಟ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಪ್ರತಿಕೂಲ ಹವಾಮಾನದಲ್ಲಿಯೂ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ತಟರಕ್ಷಣಾ ಪಡೆಯ ಸಿಬ್ಬಂದಿಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!