ಜೆಡಿಎಸ್ ಜಿಲ್ಲಾ ಮಹಿಳಾ ಘಟಕ ಪದಗ್ರಹಣ ಸಮಾರಂಭ.ಮಹಿಳಾ ಸಂಘಟನೆ ಮತ್ತಷ್ಟು ಬಲಪಡಿಸಲು ಕರೆ

ಮಂಗಳೂರು, ಜೂನ್ 30: ಜನತಾದಳ (ಜಾತ್ಯತೀತ) ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ವತಿಯಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಸಂಘಟನಾ ಸಭೆ ಮಂಗಳವಾರ ನಗರದ ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ನಡೆಯಿತು.ಶಾರದಾ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಜ್ಯೋತಿ ಜೈನ್ ಅವರು ಸಭಿಕರನ್ನು ಸ್ವಾಗತಿಸಿದರು.

ಪ್ರಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ದಕ್ಷಿಣ ಕನ್ನಡ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪು, ಮಹಿಳಾ ಸಂಘಟನೆಯನ್ನು ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಇನ್ನಷ್ಟು ಬಲಿಷ್ಠಗೊಳಿಸುವ ಅಗತ್ಯವಿದೆ ಎಂದು ಹೇಳಿದರು. ಮಹಿಳೆಯರು ರಾಜಕೀಯ, ಸಾಮಾಜಿಕ ಹಾಗೂ ಸಾರ್ವಜನಿಕ ಸೇವಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಪಕ್ಷದ ತತ್ವ-ಸಿದ್ಧಾಂತಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು ಎಂದು ಕರೆ ನೀಡಿದರು. ಸದಸ್ಯತ್ವ ವಿಸ್ತರಣೆ, ಹೊಸ ನಾಯಕತ್ವ ಬೆಳೆಸುವುದು ಹಾಗೂ ಜನಪರ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಹಿಳಾ ಘಟಕದ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಮೀಝಾ ಬಾನು, ಮಹಿಳಾ ಘಟಕವನ್ನು ಇನ್ನಷ್ಟು ಸಂಘಟಿತ ಹಾಗೂ ಸಶಕ್ತಗೊಳಿಸುವ ಉದ್ದೇಶದಿಂದ ಪದಗ್ರಹಣ ಸಮಾರಂಭ ಮತ್ತು ಸಂಘಟನಾ ಸಭೆ ಆಯೋಜಿಸಲಾಗಿದೆ ಎಂದರು. ಪಕ್ಷದ ತತ್ವ-ಸಿದ್ಧಾಂತಗಳನ್ನು ಮನೆಮನೆಗೆ ತಲುಪಿಸುವ ಜವಾಬ್ದಾರಿ ಮಹಿಳಾ ಕಾರ್ಯಕರ್ತೆಯರ ಮೇಲಿದೆ ಎಂದು ಹೇಳಿದ ಅವರು, ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ನಿರ್ವಹಿಸುವ ಮೂಲಕ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿ ಶ್ರೀಮಣಿ ಆರ್. ಶೆಟ್ಟಿ ಹಾಗೂ ಕಾನೂನು ಸಲಹೆಗಾರ್ತಿ ಭಾರತಿ ಪುಷ್ಪರಾಜನ್ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ, ಹೂಗುಚ್ಛ ನೀಡಿ ಹಾಗೂ ಶಾಲು ಹೊದಿಸಿ ಗೌರವಿಸುವ ಮೂಲಕ ಪದಗ್ರಹಣ ನೆರವೇರಿಸಲಾಯಿತು.

ಜಿಲ್ಲಾ ಮಹಿಳಾ ಘಟಕದ ನೂತನ ಪದಾಧಿಕಾರಿಗಳು:
ಕಾರ್ಯಾಧ್ಯಕ್ಷೆಯಾಗಿ ಪ್ರಿಯ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಜೈನ್, ಹಿರಿಯ ಉಪಾಧ್ಯಕ್ಷೆಯಾಗಿ ಚೂಡಾಮಣಿ ಎಲ್. ಬಂಗೇರ, ಉಪಾಧ್ಯಕ್ಷೆಯಾಗಿ ಶಾರದಾ ಶೆಟ್ಟಿ, ಕಾರ್ಯದರ್ಶಿಗಳಾಗಿ ಸಲೀಮಾ ಖಾದರ್ ಹಾಗೂ ರಾಜೇಶ್ವರಿ ಉಳ್ಳಾಲ್, ಸಂಘಟನಾ ಕಾರ್ಯದರ್ಶಿಗಳಾಗಿ ಪ್ಲೇವಿಯನ್ ಮತ್ತು ತಾರಾ ಯು.ಆರ್. ಶೆಟ್ಟಿ (ಕಿನ್ನಿಗೋಳಿ) ನೇಮಕಗೊಂಡರು.

ತಾಲೂಕು ಮಹಿಳಾ ಘಟಕಗಳ ಅಧ್ಯಕ್ಷೆಯರು:
ಪುತ್ತೂರು – ಮೀನಾಕ್ಷಿ ಎಂ., ಮಂಗಳೂರು ಉತ್ತರ – ಮೋಹಿನಿ ಶೆಟ್ಟಿ, ಮಂಗಳೂರು ದಕ್ಷಿಣ – ವೀಣಾ ಶೆಟ್ಟಿ ಹಾಗೂ ಉಳ್ಳಾಲ – ಜೋಹರ ಅವರನ್ನು ಅಧ್ಯಕ್ಷೆಯರಾಗಿ ನೇಮಕ ಮಾಡಲಾಯಿತು.

ಸಭೆಯಲ್ಲಿ ಮುಂಬರುವ ಸಂಘಟನಾ ಕಾರ್ಯಕ್ರಮಗಳು, ಮಹಿಳಾ ಸದಸ್ಯತ್ವ ಅಭಿಯಾನ, ಮಹಿಳಾ ಘಟಕದ ವಿಸ್ತರಣೆ, ವಿವಿಧ ವಿಧಾನಸಭಾ ಕ್ಷೇತ್ರಗಳ ಹಾಗೂ ಸ್ಥಳೀಯ ಘಟಕಗಳ ಕಾರ್ಯಚಟುವಟಿಕೆಗಳ ಪರಿಶೀಲನೆ, ಮಹಿಳಾ ನಾಯಕತ್ವ ಬೆಳೆಸುವ ಕಾರ್ಯಯೋಜನೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು.

ಜಿಲ್ಲಾ ಮಹಿಳಾ ಘಟಕದ ಪದಾಧಿಕಾರಿಗಳು, ವಿವಿಧ ವಿಧಾನಸಭಾ ಕ್ಷೇತ್ರಗಳ ಮಹಿಳಾ ಅಧ್ಯಕ್ಷೆಯರು, ತಾಲೂಕು ಹಾಗೂ ಸ್ಥಳೀಯ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿ, ಮಹಿಳಾ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದರು.

ಸಭೆಯು ಮಹಿಳಾ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಮಹಿಳಾ ಘಟಕದ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು.

SHARE
Loading spinner

Leave a Reply

Your email address will not be published. Required fields are marked *

error: Content is protected !!