ಬೆಂಗಳೂರು, ಜು. 1: ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ಪೂರ್ವದ ಇತಿಹಾಸದ ಶೇಕಡಾ 25ರಷ್ಟನ್ನಾದರೂ ತಿಳಿದುಕೊಂಡರೆ, ಖಾಕಿ ಚಡ್ಡಿ, ಕಪ್ಪು ಟೋಪಿ ಧರಿಸಿ ಕೈಯಲ್ಲಿ ದೊಣ್ಣೆ ಹಿಡಿದವರು ಊರು ಬಿಟ್ಟು ಓಡಿಹೋಗುವ ಪರಿಸ್ಥಿತಿ ಬರುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಭವನದಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಆರ್ಎಸ್ಎಸ್ ಬಗ್ಗೆ ಟೀಕೆ ಮಾಡುವ ಉದ್ದೇಶ ತಮ್ಮದಲ್ಲ. ಆದರೆ ಮಹಾತ್ಮ ಗಾಂಧೀಜಿ ಪ್ರತಿಪಾದಿಸಿದ ಸರ್ವಧರ್ಮ ಸಮಭಾವ, ತ್ರಿವರ್ಣ ಧ್ವಜ ಹಾಗೂ ಭಾರತೀಯ ಸಂವಿಧಾನವನ್ನು ಅವರು ಒಪ್ಪಿಕೊಂಡರೆ ಕಾಂಗ್ರೆಸ್ಗೆ ಯಾವುದೇ ವಿರೋಧವಿಲ್ಲ. ಅವರು ದೇಶದ ಶತ್ರುಗಳಲ್ಲ, ಈ ದೇಶದ ಪ್ರಜೆಗಳೇ ಎಂದು ಹೇಳಿದರು.
ಸ್ವತಂತ್ರ ಭಾರತದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ತತ್ವಗಳಿಗೆ ಆರ್ಎಸ್ಎಸ್ ಗೌರವ ನೀಡಿದರೆ ವಿರೋಧಿಸುವ ಪ್ರಶ್ನೆಯೇ ಇಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಿಂದಲೂ ಆರ್ಎಸ್ಎಸ್ ದೇಶದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ ಎಂಬ ಕಾರಣಕ್ಕೆ ಅವರನ್ನು ಅನಿವಾರ್ಯವಾಗಿ ವಿರೋಧಿಸಬೇಕಾಗಿದೆ ಎಂದು ಹರಿಪ್ರಸಾದ್ ಹೇಳಿದರು.


