ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆಯ ಮುಖ್ಯಮಂತ್ರಿಗಳ ಭರವಸೆ ಸ್ವಾಗತಾರ್ಹ; ಸರ್ಕಾರ ತಕ್ಷಣ ಆದೇಶ ಹೊರಡಿಸಲಿ – ಎಸ್.ಡಿ.ಟಿ.ಯು ಎಚ್ಚರಿಕೆ

ಬೆಂಗಳೂರು: ಬೀದಿಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ನೀಡಿರುವ ಭರವಸೆಯನ್ನು ಎಸ್.ಡಿ.ಟಿ.ಯು ಕರ್ನಾಟಕ ಸ್ವಾಗತಿಸುತ್ತದೆ. ಆದರೆ, ಈ ಭರವಸೆ ಕೇವಲ ಮಾಧ್ಯಮಗಳಲ್ಲಿನ ಹೇಳಿಕೆಯಾಗಿಯೇ ಉಳಿಯಬಾರದು. ತಕ್ಷಣವೇ ಅಧಿಕೃತ ಆದೇಶ ಹೊರಡಿಸಿ ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು ಹಾಗೂ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಬೇಕು ಎಂದು ಎಸ್.ಡಿ.ಟಿ.ಯು ಕರ್ನಾಟಕ ರಾಜ್ಯಾಧ್ಯಕ್ಷರಾದ ಅಥಾವುಲ್ಲಾ ಜೋಕಟ್ಟೆ ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಚಿವರ ಹೇಳಿಕೆಯನ್ನು ನೆಪ ಮಾಡಿಕೊಂಡು ರಾಜ್ಯದ ವಿವಿಧ ನಗರಗಳಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ಬೆದರಿಕೆ ಹಾಕುವುದು, ಬಲವಂತದ ತೆರವು ಕಾರ್ಯಾಚರಣೆ ನಡೆಸುವುದು ಹಾಗೂ ಅವರ ಜೀವನೋಪಾಯಕ್ಕೆ ಧಕ್ಕೆ ಉಂಟುಮಾಡುವ ಪ್ರಯತ್ನಗಳು ನಡೆದಿವೆ. ಸಾವಿರಾರು ಬಡ ಕುಟುಂಬಗಳನ್ನು ಆತಂಕಕ್ಕೆ ತಳ್ಳಿದ ಈ ಬೆಳವಣಿಗೆಗೆ ಸರ್ಕಾರವೇ ಹೊಣೆಗಾರವಾಗಿದೆ.

ಬೀದಿಬದಿ ವ್ಯಾಪಾರಿಗಳು ಅತಿಕ್ರಮಣಕಾರರಲ್ಲ. ಅವರು ಬೀದಿಬದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗೂ ಬೀದಿ ವ್ಯಾಪಾರದ ನಿಯಂತ್ರಣ) ಕಾಯಿದೆ–2014ರಡಿ ಕಾನೂನುಬದ್ಧ ಹಕ್ಕು ಹೊಂದಿರುವ ಕಾರ್ಮಿಕರು. ಪಟ್ಟಣ ವ್ಯಾಪಾರ ಸಮಿತಿಯ ಶಿಫಾರಸು, ಸಮೀಕ್ಷೆ ಹಾಗೂ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸದೆ ಯಾವುದೇ ವ್ಯಾಪಾರಿಯನ್ನು ತೆರವುಗೊಳಿಸುವುದು ಕಾನೂನುಬಾಹಿರವಾಗಿದೆ.

ಆದ್ದರಿಂದ ಮುಖ್ಯಮಂತ್ರಿ ನೀಡಿರುವ ಭರವಸೆಗೆ ಅನುಗುಣವಾಗಿ ರಾಜ್ಯದಾದ್ಯಂತ ನಡೆಯುತ್ತಿರುವ ಎಲ್ಲಾ ತೆರವು ಕಾರ್ಯಾಚರಣೆಗಳನ್ನು ತಕ್ಷಣ ಸ್ಥಗಿತಗೊಳಿಸಿ, ಪರ್ಯಾಯ ವ್ಯವಸ್ಥೆ ರೂಪಿಸುವವರೆಗೆ ಯಾವುದೇ ವ್ಯಾಪಾರಿಯ ಮೇಲೆ ದೌರ್ಜನ್ಯ ನಡೆಯದಂತೆ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ಅಧಿಕಾರಿಗಳ ಏಕಪಕ್ಷೀಯ ಕ್ರಮಗಳಿಗೆ ಸರ್ಕಾರ ಕಡಿವಾಣ ಹಾಕಬೇಕು.
ಸರ್ಕಾರ ತನ್ನ ಭರವಸೆಯನ್ನು ಕಾರ್ಯರೂಪಕ್ಕೆ ತರಲು ವಿಫಲವಾದರೆ, ಬೀದಿಬದಿ ವ್ಯಾಪಾರಿಗಳನ್ನು ಸಂಘಟಿಸಿ ರಾಜ್ಯವ್ಯಾಪಿ ಪ್ರಬಲ ಹೋರಾಟ ನಡೆಸಲು ಎಸ್.ಡಿ.ಟಿ.ಯು ಹಿಂಜರಿಯುವುದಿಲ್ಲ. ಬಡ ಕಾರ್ಮಿಕರ ಜೀವನೋಪಾಯದ ಮೇಲೆ ಯಾವುದೇ ರೀತಿಯ ದಾಳಿಯನ್ನು ಸಂಘಟನೆ ಸಹಿಸುವುದಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಎಸ್ಡಿಟಿಯು ಎಚ್ಚರಿಕೆ ನೀಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!