ರಾಮ ಮಂದಿರ ದೇಣಿಗೆ, ಹುಂಡಿ ಕಳವು ಆರೋಪ: ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ವಿನಯಕುಮಾರ್ ಸೊರಕೆ ಆಗ್ರಹ

ಉಡುಪಿ | ಜು. 9: ರಾಮ ಮಂದಿರದ ದೇಣಿಗೆ, ಹುಂಡಿ ಕಳವು ಹಾಗೂ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಳಿಬರುತ್ತಿರುವ ಆರೋಪಗಳ ಕುರಿತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದರು.

ಉಡುಪಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಮನ ಹೆಸರನ್ನು ಬಳಸಿಕೊಂಡು ಬಿಜೆಪಿ ಚುನಾವಣೆಗಳನ್ನು ಎದುರಿಸಿದ್ದು, ಮನೆ ಮನೆಗೆ ಇಟ್ಟಿಗೆ ನೀಡಿ ಪೂಜೆ ಮಾಡಿಸಿ ಮತ ಯಾಚನೆ ನಡೆಸಲಾಗಿತ್ತು ಎಂದು ಆರೋಪಿಸಿದರು. ರಾಮ ಮಂದಿರಕ್ಕಾಗಿ ದಶಕಗಳಿಂದ ಸಂಗ್ರಹಿಸಲಾದ ದೇಣಿಗೆಯ ಸಂಪೂರ್ಣ ಲೆಕ್ಕಪತ್ರ ಸಾರ್ವಜನಿಕರಿಗೆ ಲಭ್ಯವಿಲ್ಲ ಎಂದರು.

ಮಂದಿರ ನಿರ್ಮಾಣದ ವೇಳೆ ರಿಯಲ್ ಎಸ್ಟೇಟ್ ವ್ಯವಹಾರ ನಡೆದಿರುವ ಆರೋಪಗಳಿದ್ದು, ಟ್ರಸ್ಟ್ ಸದಸ್ಯರು ಇದಕ್ಕೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು. ಕರ್ನಾಟಕದ ಟ್ರಸ್ಟಿಯೊಬ್ಬರ ಅಳಿಯನಿಗೆ ನಿರ್ಮಾಣ ಕಾಮಗಾರಿಯಲ್ಲಿ ಅವಕಾಶ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ ಎಂದು ಹೇಳಿದರು.

ರಾಮ ಮಂದಿರಕ್ಕೆ ಭಕ್ತರು ನೀಡಿದ ಚಿನ್ನವನ್ನು ಕರ್ನಾಟಕದಲ್ಲೇ ಕರಗಿಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ರಾಮ ಮಂದಿರವನ್ನು ಹೊರಗಿಡಲಾಗಿದೆ ಎಂದು ದೂರಿದ ಅವರು, ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದುಹಾಕಿರುವುದು ಹಾಗೂ ಮಂದಿರದ ಕಟ್ಟಡದ ಕೆಲವು ಭಾಗಗಳು ಹಾನಿಗೊಳಗಾಗಿರುವ ಕುರಿತು ವರದಿಗಳು ಬಂದಿರುವ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಈ ಎಲ್ಲ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಾದರೆ ಎಸ್‌ಐಟಿ ತನಿಖೆ ಸಾಕಾಗುವುದಿಲ್ಲ. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲೇ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಭಕ್ತರ ಭಾವನೆಗೆ ಧಕ್ಕೆ ಉಂಟಾಗದಂತೆ ಪಾರದರ್ಶಕ ತನಿಖೆ ನಡೆಯಬೇಕು ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ‘ಮನ್ ಕಿ ಬಾತ್’ನಲ್ಲಿ ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ ರಾಮ ಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಮೌನ ವಹಿಸಿದ್ದಾರೆ ಎಂದು ಸೊರಕೆ ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ (ದಕ್ಷಿಣ) ಅಧ್ಯಕ್ಷ ಸುಕುಮಾರ್ ವೈ ಉಪಸ್ಥಿತರಿದ್ದರು.

ಸೂಚನೆ: ಮೇಲಿನ ಆರೋಪಗಳು ಮಾಜಿ ಸಚಿವ ವಿನಯಕುಮಾರ್ ಸೊರಕೆ ಅವರು ಸುದ್ದಿಗೋಷ್ಠಿಯಲ್ಲಿ ಮಾಡಿದ ಹೇಳಿಕೆಗಳಾಗಿದ್ದು, ಅವುಗಳ ಕುರಿತು ಸಂಬಂಧಪಟ್ಟ ಟ್ರಸ್ಟ್ ಅಥವಾ ಇತರ ಪಕ್ಷಗಳ ಪ್ರತಿಕ್ರಿಯೆ ಈವರೆಗೆ ಲಭ್ಯವಾಗಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!