ಆಗುಂಬೆಯಲ್ಲಿ ಮೊದಲ ಬಾರಿಗೆ ಅಪರೂಪದ ‘ಕನಿ ಮರಏಡಿ’ ಪತ್ತೆ

ಉಡುಪಿ, ಜು. 9: ಭಾರತದ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿ ಎಂದು ಗುರುತಿಸಲ್ಪಟ್ಟಿರುವ ಅಪರೂಪದ ‘ಕನಿ ಮರನಂಡು’ (Kani Maranjandu) ಮೊದಲ ಬಾರಿಗೆ ಆಗುಂಬೆಯಲ್ಲಿ ಪತ್ತೆಯಾಗಿದ್ದು, ಪಶ್ಚಿಮ ಘಟ್ಟದ ಜೀವವೈವಿಧ್ಯ ಅಧ್ಯಯನದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ.

ಇದುವರೆಗೆ ಈ ಅಪರೂಪದ ಏಡಿ ಕೇವಲ ಕೇರಳದ ಆಗಸ್ತ್ಯಮಲೆ ಜೈವಿಕ ವಲಯದಲ್ಲಿ ಮಾತ್ರ ದಾಖಲಾಗಿತ್ತು. ಇದೀಗ ಸುಮಾರು 566 ಕಿ.ಮೀ. ದೂರದಲ್ಲಿರುವ ಆಗುಂಬೆಯಲ್ಲಿ ಇದೇ ಪ್ರಭೇದ ಪತ್ತೆಯಾಗಿರುವುದು ಇದರ ವಿತರಣಾ ವ್ಯಾಪ್ತಿಯ ಕುರಿತು ಹೊಸ ಮಾಹಿತಿಯನ್ನು ಒದಗಿಸಿದೆ.

ಸಂಶೋಧಕರಾದ ಜೋಯೆಲ್ ಕೊರೆಯ, ಪವನ್ ಚಿಕ್ಕನಾರಾಯಣಸ್ವಾಮಿ ಹಾಗೂ ವಿಜಯ್ ಕುಮಾರ್ ನಡೆಸಿದ ಅಧ್ಯಯನದಲ್ಲಿ ಈ ಅಪರೂಪದ ಏಡಿ ಪತ್ತೆಯಾಗಿದೆ. ಗೆಕಾರ್ಸಿನುಸಿಡೆ (Gecarcinucidae) ಕುಟುಂಬಕ್ಕೆ ಸೇರಿದ ಈ ಪ್ರಭೇದವು ಭಾರತದಲ್ಲಿ ಸಂಪೂರ್ಣವಾಗಿ ಮರಗಳಲ್ಲೇ ವಾಸಿಸುವ ಏಕೈಕ ನೈಜ ಮರವಾಸಿ ಸಿಹಿನೀರಿನ ಏಡಿಯಾಗಿದೆ.

2023ರಲ್ಲಿ ಆಗುಂಬೆಯ ಸದಾಹಸಿರು ಮಳೆಕಾಡಿನಲ್ಲಿ ಈ ಏಡಿ ಮೊದಲ ಬಾರಿಗೆ ನೆಲದ ಮೇಲೆ ಸಂಚರಿಸುತ್ತಿರುವುದು ದಾಖಲಾಗಿತ್ತು. ಬಳಿಕ 2025ರಲ್ಲಿ ಮರದ ನೀರು ತುಂಬಿದ ಕುಳಿಯಲ್ಲಿ ಮತ್ತೊಂದು ಏಡಿ ಪತ್ತೆಯಾಗಿದ್ದು, ಛಾಯಾಚಿತ್ರಗಳ ಪರಿಶೀಲನೆಯ ಬಳಿಕ ಇದೇ ಪ್ರಭೇದ ಎಂದು ಸಂಶೋಧಕರು ದೃಢಪಡಿಸಿದ್ದಾರೆ.

ಉದ್ದವಾದ ಕಾಲುಗಳು, ಅಂಡಾಕಾರದ ಕವಚ, ಹಳದಿ–ಕಿತ್ತಳೆ ಬಣ್ಣದ ಕೊಕ್ಕುಗಳು ಹಾಗೂ ನೀಲಿಕಪ್ಪು ಬಣ್ಣದ ದೇಹ ಈ ಏಡಿಯ ಪ್ರಮುಖ ಲಕ್ಷಣಗಳಾಗಿವೆ. ಎರಡನೇ ಬಾರಿ ಪತ್ತೆಯಾದ ಏಡಿಯು ಗಂಡು ಎಂದು ಗುರುತಿಸಲಾಗಿದೆ.

ಇದುವರೆಗೆ ಸಂಪೂರ್ಣ ಮರವಾಸಿ ಎಂದು ಪರಿಗಣಿಸಲಾಗಿದ್ದ ಈ ಏಡಿ ಆಗುಂಬೆಯಲ್ಲಿ ನೆಲದ ಮೇಲೂ ಸಂಚರಿಸುತ್ತಿರುವುದು ದಾಖಲಾಗಿರುವುದು ಇದರ ವರ್ತನೆ ಮತ್ತು ಪರಿಸರಶಾಸ್ತ್ರದ ಕುರಿತು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಂಗಾತಿಯನ್ನು ಹುಡುಕುವುದು ಅಥವಾ ಹೊಸ ವಾಸಸ್ಥಳವನ್ನು ಅನ್ವೇಷಿಸುವ ಉದ್ದೇಶದಿಂದ ಇದು ನೆಲಕ್ಕಿಳಿಯುವ ಸಾಧ್ಯತೆ ಇದ್ದು, ವಿಶೇಷವಾಗಿ ಮಳೆಗಾಲದಲ್ಲಿ ಈ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಏಡಿಯು ನಿತ್ಯಹರಿದ್ವರ್ಣ ಹಾಗೂ ಅರೆ ನಿತ್ಯಹರಿದ್ವರ್ಣ ಕಾಡಿನ ಮರಗಳ ಕಾಂಡದಲ್ಲಿರುವ ನೀರು ತುಂಬಿದ ಕುಳಿಗಳಲ್ಲಿ ವಾಸಿಸುತ್ತದೆ. ಎಲೆಗಳು, ಬೀಜಗಳು, ಕೀಟಗಳು ಹಾಗೂ ಸ್ಲಗ್‌ಗಳು ಇದರ ಪ್ರಮುಖ ಆಹಾರವಾಗಿವೆ.

ಆಗುಂಬೆಯಲ್ಲಿ ಈ ಅಪರೂಪದ ಪ್ರಭೇದದ ಹೊಸ ದಾಖಲೆಯು ಪಶ್ಚಿಮ ಘಟ್ಟದ ಜೀವವೈವಿಧ್ಯ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದ್ದು, ಇದರ ವಿತರಣೆ, ವರ್ತನೆ ಮತ್ತು ಸಂರಕ್ಷಣೆಯ ಕುರಿತು ಇನ್ನಷ್ಟು ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!