ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕ್ ಬೈಠಕ್ ಶುಕ್ರವಾರ ಬೆಳಗಾವಿಯಲ್ಲಿ ಆರಂಭಗೊಂಡಿದ್ದು, ದೇಶದ ವಿವಿಧ ಭಾಗಗಳಿಂದ ಹಿರಿಯ ಪ್ರಚಾರಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಮೂರು ದಿನಗಳ ಈ ಸಭೆ ಜುಲೈ 12ರಂದು ಮುಕ್ತಾಯಗೊಳ್ಳಲಿದೆ.
ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಸಮ್ಮುಖದಲ್ಲಿ ನಡೆಯುತ್ತಿರುವ ಸಭೆಯಲ್ಲಿ ರಾಷ್ಟ್ರವ್ಯಾಪಿ ಜನಗಣತಿ, ಸಂಘಟನಾ ಚಟುವಟಿಕೆಗಳು, ಶಾಖೆಗಳ ವಿಸ್ತರಣೆ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.
ಸಭೆಯಲ್ಲಿ ದೇಶದ 11 ಕ್ಷೇತ್ರಗಳು ಹಾಗೂ 46 ಪ್ರಾಂತಗಳ ಪ್ರಾಂತ ಪ್ರಚಾರಕರು, ಸಹ ಪ್ರಾಂತ ಪ್ರಚಾರಕರು, ಕ್ಷೇತ್ರ ಪ್ರಚಾರಕರು, ಸಹ ಕ್ಷೇತ್ರ ಪ್ರಚಾರಕರು, ಸಹ ಸರಕಾರ್ಯವಾಹರು, ಅಖಿಲ ಭಾರತೀಯ ಕಾರ್ಯ ವಿಭಾಗದ ಪ್ರಮುಖರು ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರು ಭಾಗವಹಿಸಿದ್ದಾರೆ. ಅಲ್ಲದೆ, ಸಂಘ ಪ್ರೇರಿತ 32 ಸಂಸ್ಥೆಗಳ ಅಖಿಲ ಭಾರತೀಯ ಸಂಘಟನಾ ಮಂತ್ರಿಗಳೂ ಉಪಸ್ಥಿತರಿದ್ದಾರೆ.

ಶಾಖಾ ಮಟ್ಟದಲ್ಲಿ ವಾರ್ಷಿಕ ಕಾರ್ಯಯೋಜನೆಗಳ ಅನುಷ್ಠಾನ, ಸಂಘದ ಶತಮಾನೋತ್ಸವ ಅಂಗವಾಗಿ ಕೈಗೊಂಡಿರುವ ಶಾಖಾ ವಿಸ್ತರಣೆಯ ಪ್ರಗತಿ, ಮುಂದಿನ ವಿಸ್ತರಣೆ ಯೋಜನೆಗಳು ಹಾಗೂ 2026ರ ಸಂಘ ತರಬೇತಿ ಶಿಬಿರಗಳ ವರದಿ ಮತ್ತು ವಿಮರ್ಶೆ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಶತಮಾನೋತ್ಸವ ವರ್ಷದ ಉಳಿದ ಕಾರ್ಯಕ್ರಮಗಳು, ವಿಜಯದಶಮಿವರೆಗೆ ನಡೆಯಲಿರುವ ಚಟುವಟಿಕೆಗಳು ಹಾಗೂ 2026–27ನೇ ಸಾಲಿನ ಸರಸಂಘಚಾಲಕರ ಪ್ರವಾಸ ಯೋಜನೆಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.
ಪ್ರಸ್ತುತ ಸಾಮಾಜಿಕ ಮತ್ತು ರಾಷ್ಟ್ರೀಯ ಸನ್ನಿವೇಶಗಳು, ಜನಗಣತಿಯಂತಹ ಸಮಕಾಲೀನ ವಿಷಯಗಳ ಕುರಿತು ಪ್ರಚಾರಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ ಎಂದು ಆರ್‌ಎಸ್‌ಎಸ್ ರಾಷ್ಟ್ರೀಯ ಮಾಧ್ಯಮ ಮತ್ತು ಪ್ರಚಾರ ಉಸ್ತುವಾರಿ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.

