ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಹೊಸದಿಲ್ಲಿಗೆ ಭಾರತದಲ್ಲೇ ಅಗ್ರಸ್ಥಾನ

ಹೊಸದಿಲ್ಲಿ: ಜಾಗತಿಕ ವಾಸಯೋಗ್ಯ ನಗರಗಳ ಸೂಚ್ಯಂಕ-2026ರಲ್ಲಿ ಹೊಸದಿಲ್ಲಿ 120ನೇ ಸ್ಥಾನ ಪಡೆಯುವ ಮೂಲಕ ಭಾರತದ ಅತ್ಯಂತ ವಾಸಯೋಗ್ಯ ನಗರವಾಗಿ ಹೊರಹೊಮ್ಮಿದೆ. ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ (EIU) ಬಿಡುಗಡೆ ಮಾಡಿರುವ ಗ್ಲೋಬಲ್ ಲಿವೆಬಿಲಿಟಿ ಇಂಡೆಕ್ಸ್-2026 ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಜಗತ್ತಿನ 173 ನಗರಗಳನ್ನು ಮೌಲ್ಯಮಾಪನ ಮಾಡಿರುವ ವರದಿಯಲ್ಲಿ, ಡೆನ್ಮಾರ್ಕ್‌ನ ಕೋಪನ್‌ಹೇಗನ್ ವಿಶ್ವದ ಅತ್ಯಂತ ವಾಸಯೋಗ್ಯ ನಗರವಾಗಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆಸ್ಟ್ರಿಯಾದ ವಿಯೆನ್ನಾ ಎರಡನೇ ಹಾಗೂ ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೂರನೇ ಸ್ಥಾನ ಪಡೆದಿವೆ.

ಭಾರತದ ನಗರಗಳ ಪೈಕಿ ಹೊಸದಿಲ್ಲಿ 120ನೇ ಸ್ಥಾನದಲ್ಲಿದ್ದರೆ, ಮುಂಬೈ 121ನೇ, ಚೆನ್ನೈ 123ನೇ ಹಾಗೂ ಬೆಂಗಳೂರು 127ನೇ ಸ್ಥಾನದಲ್ಲಿವೆ. ಹೊಸದಿಲ್ಲಿ ಮತ್ತು ಮುಂಬೈ ನಗರಗಳ ಶ್ರೇಯಾಂಕ ಕಳೆದ ವರ್ಷದಂತೆಯೇ ಮುಂದುವರಿದಿದ್ದು, ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ, ಚೀನಾದ 10 ನಗರಗಳು ಕಳೆದ ವರ್ಷಕ್ಕೆ ಹೋಲಿಸಿದರೆ ತಮ್ಮ ಸ್ಥಾನವನ್ನು ಸುಧಾರಿಸಿಕೊಂಡಿವೆ ಎಂದು ವರದಿ ತಿಳಿಸಿದೆ.

ವರದಿಯ ಪ್ರಕಾರ, ಪಶ್ಚಿಮ ಯುರೋಪ್ ಇನ್ನೂ ವಿಶ್ವದ ಅತ್ಯಂತ ವಾಸಯೋಗ್ಯ ಪ್ರದೇಶವಾಗಿ ಮುಂದುವರಿದಿದ್ದರೂ, ಅಲ್ಲಿನ ಸರಾಸರಿ ಅಂಕಗಳಲ್ಲಿ ಏರಿಕೆ ಕಂಡುಬಂದಿಲ್ಲ. ಮತ್ತೊಂದೆಡೆ, ಏಷ್ಯಾದ ನಗರಗಳ ಸಾಧನೆ ಉತ್ತಮಗೊಂಡಿದ್ದು, ಇರಾನ್ ಯುದ್ಧದ ಪರಿಣಾಮ ಗಲ್ಫ್ ಪ್ರದೇಶದ ನಗರಗಳ ಸ್ಥಿರತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ವರದಿ ಉಲ್ಲೇಖಿಸಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜನಾಗ್ರಹ ಸಂಸ್ಥೆಯ ಸಿಇಒ ಶ್ರೀಕಾಂತ್ ವಿಶ್ವನಾಥನ್, “ಭಾರತದ ನಗರಗಳು ಜಾಗತಿಕ ಪಟ್ಟಿಯಲ್ಲಿ ಕೆಳಮಟ್ಟದ ಸ್ಥಾನದಲ್ಲಿರುವುದು, ಹೂಡಿಕೆದಾರರು ಮತ್ತು ಪ್ರತಿಭಾವಂತರನ್ನು ಆಕರ್ಷಿಸುವಲ್ಲಿ ನಾವು ಇನ್ನಷ್ಟು ಸುಧಾರಣೆ ಮಾಡಬೇಕಿದೆ ಎಂಬುದನ್ನು ಸೂಚಿಸುತ್ತದೆ. ನಗರಗಳನ್ನು ಹೆಚ್ಚು ಸಮರ್ಥ ಹಾಗೂ ವಾಸಯೋಗ್ಯವಾಗಿ ರೂಪಿಸುವತ್ತ ಆದ್ಯತೆ ನೀಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!