” ಸಾಮಾಜಿಕ ಜಾಲತಾಣದ ಓದಿಗಿಂತ ಯಥಾರ್ಥ ಪುಸ್ತಕಗಳನ್ನು ಕೈಗೆತ್ತಿಕೊಂಡು ಓದ ಬೇಕು.ಕವಿ ಕಯ್ಯಾರರಂತಹ ಮೇರು ವ್ಯಕ್ತಿತ್ವವನ್ನು ಅಧ್ಯಯನ ಮಾಡಬೇಕು.ಸರ್ವಕಾಲಕ್ಕು ಅನ್ವಯವಾಗುವ ಭಾಷಾ ಶೈಲಿ , ಪದ ಜೋಡಣೆ , ಜೀವನ ಸಂದೇಶಗಳು ಅವರ ಸಾಹಿತ್ಯ ಕೃತಿಗಳಲ್ಲಿ ಹೇರಳವಾಗಿದೆ.ಅವರದ್ದು ಕಾವ್ಯದ ರಸದಡುಗೆ.ಕನ್ನಡ , ತುಳು ಭಾಷೆಯಲ್ಲಿ ಅವರ ಪಾಂಡಿತ್ಯ ನಮಗೆಲ್ಲ ಸ್ಫೂರ್ತಿದಾಯಕ.ಹೆಸರಿನಲ್ಲಿ ಕಿಂಞಣ್ಣ ಎಂದಿದ್ದರೂ ಕನ್ನಡಿಗರಾದ ನಮಗೆ ಅವರು ದೊಡ್ಡಣ್ಣನಂತೆ ” ಎಂಬುದಾಗಿ ಕವಿ ಸಾಹಿತಿ ಶ್ರೀ ದಯಾನಂದ ರೈ ಕಳ್ವಾಜೆ ಏತಡ್ಕದ ಕುಂಬ್ಡಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯದಲ್ಲಿ ಮುಖ್ಯ ಅತಿಥಿಗಳಾಗಿ ನುಡಿದರು.ಕವಿ ಕಯ್ಯಾರ ಕಿಞ್ಞಣ್ಣ ರೈ ಯವರ ಸಂಸ್ಮರಣೆ ನೆರವೇರಿಸಿದರು. ವಾಚನಾ ಪಕ್ಷಾಚರಣೆ ಪ್ರಯುಕ್ತ ಈ ಕಾರ್ಯಕ್ರಮವನ್ನು ಏತಡ್ಕದ ಸಮಾಜ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಆರಂಭದಲ್ಲಿ ಗ್ರಂಥಾಲಯದ ಕಾರ್ಯದರ್ಶಿ ಶ್ರೀ ಸುಬ್ರಹ್ಮಣ್ಯ ಭಟ್ ಕೆ ಸ್ವಾಗತಿಸಿದರು.ಗ್ರಂಥಾಲಯದ ಅಧ್ಯಕ್ಷರಾದ ಶ್ರೀ ವೈ.ಕೆ.ಗಣಪತಿ ಭಟ್ ಸಭಾಧ್ಯಕ್ಷತೆ ವಹಿಸಿದ್ದರು.ಕುಂಬಡಾಜೆ ಪಂಚಾಯತು ಗ್ರಂಥಾಲಯ ಸಮಿತಿ ಸಂಚಾಲಕರಾದ ಶ್ರೀ ಪ್ರಶಾಂತ್ ಜಿ ವಿಶೇಷ ಆಹ್ವಾನಿತರಾಗಿ ಗ್ರಂಥಾಲಯದ ಅಭಿವೃದ್ಧಿಗಳ ಕುರಿತು ಮಾರ್ಗದರ್ಶನಗೈದರು. ಹಿರಿಯ ಸಾಹಿತಿಗಳಾದ ಶ್ರೀ ನರಸಿಂಹ ಭಟ್ ಕಟ್ಟದಮೂಲೆ ಕವಿ ಕಯ್ಯಾರರ ಕುರಿತು ತಾವು ರಚಿಸಿದ ಮುಕ್ತಕವನ್ನು ಪ್ರಸ್ತುತ ಪಡಿಸಿದರು.

ಈ ವಿಶೇಷ ಕಾರ್ಯಕ್ರಮದ ಅಂಗವಾಗಿ ಶಾಲಾಮಕ್ಕಳಾದ ಕೃತಿಕಾ, ಗಗನ್ ರಾಜ್, ಪಾರ್ಥ ಶರ್ಮ, ರಶ್ಮಿಕಾ ರವಿ, ಯಶ್ವಿತಾ ಮುಂತಾದವರು ಕಯ್ಯಾರರ ಕುರಿತು ಮಾತನಾಡಿದರು.
ಗ್ರಂಥಾಲಯದ ಕಾರ್ಯಕಾರೀ ಸಮಿತಿ ಸದಸ್ಯರಾದ ಶ್ರೀ ಚಂದ್ರಶೇಖರ ಏತಡ್ಕ ಧನ್ಯವಾದ ನೀಡಿದರು.

