₹64 ಕೋಟಿ ವೆಚ್ಚದ ಸುಲ್ತಾನ್ ಬತ್ತೇರಿ–ತಣ್ಣೀರುಬಾವಿ ಬೋ ಸ್ಟಿಂಗ್ ಸೇತುವೆ ಸೆಪ್ಟೆಂಬರ್ ಅಂತ್ಯಕ್ಕೆ ಸಿದ್ಧ

ಮಂಗಳೂರು, ಜುಲೈ 14: ಮಂಗಳೂರಿನ ಸುಲ್ತಾನ್ ಬತ್ತೇರಿ ಮತ್ತು ತಣ್ಣೀರುಬಾವಿಯನ್ನು ಸಂಪರ್ಕಿಸುವ ₹64 ಕೋಟಿ ವೆಚ್ಚದ ಅತ್ಯಾಧುನಿಕ ಬೋ ಸ್ಟಿಂಗ್ ಮಾದರಿಯ ಸೇತುವೆ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಎಲ್ಲವೂ ಯೋಜನೆಯಂತೆ ನಡೆದರೆ ಸೆಪ್ಟೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ. ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಈ ಸೇತುವೆ ನಗರದ ಹೊಸ ಆಕರ್ಷಣೆಯಾಗಿ ರೂಪುಗೊಂಡಿದೆ.

ಕರ್ನಾಟಕದಲ್ಲೇ ಮೊದಲ ಬಾರಿಗೆ ನಿರ್ಮಾಣವಾಗುತ್ತಿರುವ ಬೋ ಸ್ಟಿಂಗ್ ಮಾದರಿಯ ವಾಹನ ಸಂಚಾರ ಸೇತುವೆ 285 ಮೀಟರ್ ಉದ್ದ ಹೊಂದಿದ್ದು, 100 ಮೀಟರ್ ನಾವಿಗೇಶನ್ ಸ್ಪಾನ್ ಹಾಗೂ 10 ಮೀಟರ್ ಲಂಬ ಕ್ಲಿಯರೆನ್ಸ್‌ ಹೊಂದಿದೆ. ರಾಷ್ಟ್ರೀಯ ಜಲಮಾರ್ಗ–43ರ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಾಣಗೊಳ್ಳುತ್ತಿರುವ ಈ ಸೇತುವೆ, ಜಲಸಂಚಾರಕ್ಕೂ ಯಾವುದೇ ಅಡಚಣೆ ಉಂಟಾಗದಂತೆ ವಿನ್ಯಾಸಗೊಳಿಸಲಾಗಿದೆ.

ಪ್ರಸ್ತುತ ಬೆಂಗ್ರೆ ಹಾಗೂ ತಣ್ಣೀರುಬಾವಿ ಭಾಗದ ನಿವಾಸಿಗಳು ಬೋಟ್ ಸೇವೆ ಅಥವಾ ಕೂಳೂರು ಮಾರ್ಗವಾಗಿ ಸುಮಾರು 30ರಿಂದ 35 ನಿಮಿಷ ಪ್ರಯಾಣಿಸಿ ನಗರ ತಲುಪಬೇಕಾಗಿದೆ. ಸೇತುವೆ ಆರಂಭವಾದ ಬಳಿಕ ಈ ಪ್ರಯಾಣದ ಅವಧಿ ಕೇವಲ 8ರಿಂದ 10 ನಿಮಿಷಗಳಿಗೆ ಇಳಿಕೆಯಾಗಲಿದ್ದು, ಸುಮಾರು 4,000ಕ್ಕೂ ಹೆಚ್ಚು ಕುಟುಂಬಗಳಿಗೆ ನೇರ ಪ್ರಯೋಜನವಾಗಲಿದೆ. ಸ್ಥಳೀಯರ ಹಲವು ದಶಕಗಳ ಸಂಚಾರ ಸಮಸ್ಯೆಗೆ ಇದು ಶಾಶ್ವತ ಪರಿಹಾರವಾಗಲಿದೆ.

ಈ ಯೋಜನೆ ಮಾಜಿ ಶಾಸಕ ಎನ್. ಯೋಗೀಶ್ ಭಟ್ ಅವರ ಕನಸಿನ ಯೋಜನೆಯಾಗಿದ್ದು, 2010ರ ಆಗಸ್ಟ್ 23ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ನೆರವೇರಿಸಿದ್ದರು. ಅನುದಾನದ ಕೊರತೆಯಿಂದ ಹಲವು ವರ್ಷಗಳು ಕಾಮಗಾರಿ ಸ್ಥಗಿತಗೊಂಡಿದ್ದರೂ, ಇದೀಗ ವೇಗ ಪಡೆದು ಅಂತಿಮ ಹಂತ ತಲುಪಿದೆ. ಸೇತುವೆ ಪೂರ್ಣಗೊಂಡ ಬಳಿಕ ತಣ್ಣೀರುಬಾವಿ–ಬೆಂಗ್ರೆ ಪ್ರದೇಶದ ಸಂಪರ್ಕ ವ್ಯವಸ್ಥೆ ಸುಧಾರಿಸುವುದರ ಜೊತೆಗೆ ಪ್ರವಾಸೋದ್ಯಮ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಹೊಸ ಉತ್ತೇಜನ ದೊರೆಯುವ ನಿರೀಕ್ಷೆಯಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!