ಸರಕಾರಿ ಆಸ್ಪತ್ರೆಗಳನ್ನು ಉಳಿಸಿ: ಸಿಪಿಐ(ಎಂ) ಶಕ್ತಿನಗರ ಶಾಖೆ ನೇತೃತ್ವದಲ್ಲಿ ಮಾನವ ಸರಪಳಿ

ಸರಕಾರಿ ಆಸ್ಪತ್ರೆಗಳನ್ನು ಖಾಸಗೀಕರಣಗೊಳಿಸುವ ಸರ್ಕಾರದ ಪ್ರಯತ್ನವನ್ನು ವಿರೋಧಿಸಿ ಹಾಗೂ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಂತೆ ಆಗ್ರಹಿಸಿ, ಸಿಪಿಐ(ಎಂ) ಶಕ್ತಿನಗರ ಶಾಖೆಯ ನೇತೃತ್ವದಲ್ಲಿ ಶಕ್ತಿನಗರದ ನಗರ ಆರೋಗ್ಯ ಕೇಂದ್ರದ ಎದುರು ಮಾನವ ಸರಪಳಿ ಕಾರ್ಯಕ್ರಮ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ(ಎಂ) ಮಂಗಳೂರು ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು, ಆರೋಗ್ಯವು ಜನರ ಮೂಲಭೂತ ಹಕ್ಕಾಗಿದ್ದು, ಸರಕಾರಿ ಆಸ್ಪತ್ರೆಗಳನ್ನು ಖಾಸಗಿಕರಣಗೊಳಿಸುವ ಯಾವುದೇ ಪ್ರಯತ್ನವನ್ನು ಜನರು ಒಗ್ಗಟ್ಟಿನಿಂದ ತಡೆಯಬೇಕಾಗಿದೆ. ಸರ್ಕಾರವು ಖಾಸಗೀಕರಣದ ನೀತಿಯನ್ನು ಕೈಬಿಟ್ಟು ಸರಕಾರಿ ಆಸ್ಪತ್ರೆಗಳಿಗೆ ಅಗತ್ಯ ವೈದ್ಯರು, ಸಿಬ್ಬಂದಿ, ಔಷಧ ಮತ್ತು ಮೂಲಸೌಕರ್ಯಗಳನ್ನು ಒದಗಿಸಿ ಸಾರ್ವಜನಿಕ ಆರೋಗ್ಯ ಸೇವೆಯನ್ನು ಮತ್ತಷ್ಟು ಬಲಪಡಿಸಬೇಕು.


ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣಗೊಂಡಿರುವ ಸರಕಾರಿ ಆಸ್ಪತ್ರೆಗಳು ಬಡವರು, ದುಡಿಯುವ ವರ್ಗ ಹಾಗೂ ಮಧ್ಯಮ ವರ್ಗದ ಜನರ ಜೀವನಾಡಿಯಾಗಿವೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಜನರ ಆರೋಗ್ಯ ಹಿತದೃಷ್ಟಿಯಿಂದ ಮಂಗಳೂರಿನಲ್ಲಿ ತಕ್ಷಣವೇ ಜಯದೇವ ಹೃದ್ರೋಗ ಆಸ್ಪತ್ರೆಯ ಘಟಕ ಹಾಗೂ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಘಟಕವನ್ನು ಸ್ಥಾಪಿಸಬೇಕು. ಜೊತೆಗೆ, ಸರಕಾರಿ ಆಸ್ಪತ್ರೆಗಳನ್ನು ದುರ್ಬಲಗೊಳಿಸುವ ಮತ್ತು ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುವ ಎಲ್ಲ ಕ್ರಮಗಳನ್ನು ಕೈಬಿಟ್ಟು, ವೈದ್ಯರು ಮತ್ತು ಸಿಬ್ಬಂದಿಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಅಗತ್ಯ ಔಷಧ, ವೈದ್ಯಕೀಯ ಉಪಕರಣಗಳು ಹಾಗೂ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಸಂಘಟನೆಯ ಮಂಗಳೂರು ನಗರ ಕಾರ್ಯದರ್ಶಿ ರವಿಚಂದ್ರ ಕೊಂಚಾಡಿ ಹಾಗೂ ಅಧ್ಯಕ್ಷರಾದ ಶಶಿಧರ್ ಶಕ್ತಿನಗರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಿಪಿಐ(ಎಂ) ನಗರ ಉತ್ತರ ಕಾರ್ಯದರ್ಶಿ ಪ್ರಮೀಳಾ ಶಕ್ತಿನಗರ, ಜಯಪ್ರಕಾಶ್, ಉಮೇಶ್ ಶಕ್ತಿನಗರ, ವಾಸುದೇವ ಜೆ.ಪಿ.,ತುಕರಾಂ ಶಕ್ತಿನಗರ , ಮೋಹನ್ ಶಕ್ತಿನಗರ, ರಾಜೇಶ್ ಉರ್ವಾಸ್ಟೋರ್, ಕಿಶೋರ್ ಉರ್ವಾಸ್ಟೋರ್ ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!