ಹನಗೋಡು: ಪಂಚಾಯಿತಿ ಪಿಡಿಒ ಅನಿತಾ ಅವರ ಕಾರ್ಯವೈಖರಿಯನ್ನು ಖಂಡಿಸಿ ಗ್ರಾಮಸ್ಥರು ಹಾಗೂ ಫಲಾನುಭವಿಗಳು ಹನಗೋಡು ಗ್ರಾಮ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಪ್ರತಿಭಟನಾಕಾರರು ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿ, ಸಾರ್ವಜನಿಕರ ಕೆಲಸಗಳಿಗೆ ಆದ್ಯತೆ ನೀಡದೆ ಸ್ವೇಚ್ಛಾಚಾರದ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೂರ್ಣಗೊಂಡ ಕಾಮಗಾರಿಗಳ ಬಿಲ್‌ಗಳನ್ನು ಪಾವತಿಸದೆ ಗುತ್ತಿಗೆದಾರರನ್ನು ಹಾಗೂ ಸಾರ್ವಜನಿಕರನ್ನು ತಿಂಗಳುಗಟ್ಟಲೆ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫಲಾನುಭವಿಗಳು ನಿರ್ಮಿಸಿಕೊಂಡಿರುವ ಕೊಟ್ಟಿಗೆ ಹಾಗೂ ಗೃಹ ಶೌಚಾಲಯಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ, ಎರಡು-ಮೂರು ವರ್ಷಗಳಿಂದಲೂ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಿಲ್ಲ, ಕಾಮಗಾರಿಗಳನ್ನು ಪೂರ್ಣಗೊಳಿಸಿದ ಗುತ್ತಿಗೆದಾರರಿಗೂ ಹಣ ಪಾವತಿಸದೇ ಇರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಗುತ್ತಿಗೆದಾರರು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗುತ್ತಿಗೆದಾರ ಪಾಂಡು ಆರೋಪಿಸಿದರು.

ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಬೋರೆಗೌಡ ಮಾತನಾಡಿ, ಗ್ರಾಮದ ಬೀದಿದೀಪಗಳ ದುರಸ್ತಿ, ರಸ್ತೆ ಬದಿ ಬೆಳೆದಿರುವ ಗಿಡಗಂಟೆಗಳ ತೆರವು, ಲಕ್ಷ್ಮಣತೀರ್ಥ ನದಿ ತೀರದಲ್ಲಿ ಕಸ ವಿಲೇವಾರಿ ಸೇರಿದಂತೆ ಮೂಲಭೂತ ಸಮಸ್ಯೆಗಳತ್ತ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.ಗ್ರಾಮದ ಮುಖಂಡ ಸುರೇಶ್ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೋಂದಾಯಿತ ನಿವೇಶನಗಳ ಖಾತೆ ಹಾಗೂ ಇ-ಸ್ವತ್ತು ನೀಡುವಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಹಣ ನೀಡಿದವರಿಗೆ ಮಾತ್ರ ಶೀಘ್ರವಾಗಿ ಕೆಲಸ ಮಾಡಿಕೊಡಲಾಗುತ್ತಿದೆ ಎಂಬ ಆರೋಪವನ್ನು ಮಾಡಿದರು.

ಗ್ರಾಮದ ಮಾದೇವಮ್ಮ ಮಾತನಾಡಿ, ತಾವು ವೈಯಕ್ತಿಕವಾಗಿ ಗೃಹ ಶೌಚಾಲಯ ನಿರ್ಮಿಸಿಕೊಂಡಿದ್ದು, ಸಂಬಂಧಿಸಿದ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದಾಗ ₹1,500 ಹಣ ಪಡೆದರೂ ಇದುವರೆಗೆ ಬಿಲ್ ಪಾವತಿಸಿಲ್ಲ. ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಪ್ರತಿಭಟನಾ ಸ್ಥಳಕ್ಕೆ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಹೊಂಗಯ್ಯ ಧಾವಿಸಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ ಈ ಕುರಿತು ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಜಿಲ್ಲಾ ಪಂಚಾಯಿತಿಯಿಂದ ಅಧಿಕಾರಿಗಳ ತಂಡ ಪರಿಶೀಲನೆಗೆ ಆಗಮಿಸಿದ್ದು, ಸಾರ್ವಜನಿಕರಿಂದ ಲಿಖಿತ ಮನವಿ ಸ್ವೀಕರಿಸಲಾಗಿದೆ. ಸಮಸ್ಯೆಗಳ ಕುರಿತು ವರದಿ ಸಲ್ಲಿಸಿ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನಾಕಾರರು ಪಿಡಿಒ ಅನಿತಾ ಅವರನ್ನು ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದಾಗ, ಅವರು ಆರೋಗ್ಯ ಸಮಸ್ಯೆಯಿಂದ ರಜೆ ಮೇಲೆ ಇದ್ದಾರೆ ಎಂದು ಹೊಂಗಯ್ಯ ತಿಳಿಸಿದರು. ಈ ಸಂಬಂಧ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪಂಚಾಯಿತಿ ಎಪಿಒ ಸತೀಶ್, ತಾಲೂಕು ಪಂಚಾಯಿತಿ ಅಧಿಕಾರಿಗಳು ರಾಜೇಶ್, ಮಹೇಶ್ ನಾಯಕ್, ಇಂಜಿನಿಯರ್ ಪವಿತ್ರ, ಸಿಬ್ಬಂದಿ ಕಲ್ಪನಾ ಹಾಗೂ ಗ್ರಾಮಸ್ಥರಾದ ಶ್ರೀಧರ್, ನಾಗರಾಜು, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

