ಉಪ್ಪೂರಿನ ನಂದಿನಿ ಡೇರಿಗೆ ಸಂಪರ್ಕಿಸುವ ರಸ್ತೆಯಲ್ಲಿ ಬಿರುಕು; ತಕ್ಷಣ ದುರಸ್ತಿಗೆ ಸಾರ್ವಜನಿಕರ ಆಗ್ರಹ

ಬ್ರಹ್ಮಾವರ: ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಎಂಎಫ್ ನಂದಿನಿ ಡೇರಿಗೆ ಸಂಪರ್ಕಿಸುವ ಪ್ರಮುಖ ರಸ್ತೆಯ ಮಧ್ಯಭಾಗದಲ್ಲಿ ದೊಡ್ಡ ಬಿರುಕು ಉಂಟಾಗಿದ್ದು, ಯಾವುದೇ ಕ್ಷಣದಲ್ಲಿ ಭಾರಿ ಅನಾಹುತ ಸಂಭವಿಸುವ ಆತಂಕ ಎದುರಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ರಸ್ತೆಯ ಎರಡೂ ಬದಿಗಳಲ್ಲಿ ಆಳವಾದ ಕಂದಕಗಳಿದ್ದು, ಕಳೆದ ಒಂದು ವರ್ಷದಿಂದ ಈ ಸಮಸ್ಯೆ ಮುಂದುವರಿದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ದೂರಿದ್ದಾರೆ.

ಪ್ರತಿದಿನ ನಂದಿನಿ ಡೇರಿಗೆ ಹಾಲು ಸಾಗಿಸುವ ಟ್ಯಾಂಕರ್‌ಗಳು, ಕಂಟೇನರ್‌ಗಳು ಸೇರಿದಂತೆ ಭಾರೀ ವಾಹನಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಿವೆ. ರಸ್ತೆಯ ಮಧ್ಯಭಾಗದಲ್ಲಿ ಉಂಟಾಗಿರುವ ಬಿರುಕು ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ಮಳೆಯ ಸಂದರ್ಭ ರಸ್ತೆ ಕುಸಿಯುವ ಅಪಾಯ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

ಆದ್ದರಿಂದ ಕೆಎಂಎಫ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಹಾಗೂ ಸಂಬಂಧಿತ ಇಲಾಖೆಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ, ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ಅಲ್ಲಿಯವರೆಗೆ ಭಾರೀ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಸಾರ್ವಜನಿಕರು ಹಾಗೂ ವಾಹನ ಸವಾರರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!