ವಾಷಿಂಗ್ಟನ್ : ಇರಾನ್ ವಿರುದ್ಧ ಅಮೆರಿಕ ಮಿಲಿಟರಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಸತತ ಆರನೇ ದಿನವೂ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್, ಕತಾರ್ ಸೇರಿದಂತೆ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ಹೆಚ್ಚಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ದೇಶನದಂತೆ ಇರಾನ್‌ನ ಸೇತುವೆಗಳು ಹಾಗೂ ಪ್ರಮುಖ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಹಲವು ಸೇತುವೆಗಳು ಹಾನಿಗೊಳಗಾಗಿದ್ದು, ಸಾವುನೋವುಗಳು ಸಂಭವಿಸಿವೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ಕತಾರ್‌ನ ವಾಯು ರಕ್ಷಣಾ ವ್ಯವಸ್ಥೆ ಹಲವು ಕ್ಷಿಪಣಿಗಳನ್ನು ಹೊಡೆದುರುಳಿಸಿದ್ದು, ಅವಶೇಷ ಬಿದ್ದು ಒಂದು ಮಗು ಗಾಯಗೊಂಡಿದೆ.

ಕಳೆದ ತಿಂಗಳು ಜಾರಿಯಾಗಿದ್ದ ತಾತ್ಕಾಲಿಕ ಕದನ ವಿರಾಮ ಮುರಿದುಬಿದ್ದ ಬಳಿಕ ಎರಡೂ ರಾಷ್ಟ್ರಗಳ ನಡುವೆ ದಾಳಿ-ಪ್ರತಿದಾಳಿಗಳು ತೀವ್ರಗೊಂಡಿವೆ. ಹಾರ್ಮುಜ್ ಜಲಸಂಧಿಯ ನಿಯಂತ್ರಣಕ್ಕಾಗಿ ಸಂಘರ್ಷ ಮುಂದುವರಿದಿದ್ದು, ಜಾಗತಿಕ ತೈಲ ಸಾಗಣೆ ಮೇಲೂ ಪರಿಣಾಮ ಬೀರಿದೆ


