ಅಡುಗೆ ಎಣ್ಣೆ ದರ ದಿಢೀರ್ ಏರಿಕೆ; ಗೃಹಿಣಿಯರ ಬಜೆಟ್‌ಗೆ ಭಾರೀ ಹೊಡೆತ

ಬೆಂಗಳೂರು, ಜು.23: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ಅಡುಗೆ ಎಣ್ಣೆ ದರ ಏರಿಕೆ ಮತ್ತೊಂದು ದೊಡ್ಡ ಹೊಡೆತ ನೀಡಿದೆ. ದೈನಂದಿನ ಬಳಕೆಯ ಪ್ರಮುಖ ಅಡುಗೆ ಎಣ್ಣೆಗಳಾದ ಸೂರ್ಯಕಾಂತಿ, ಪಾಮ್ ಆಯಿಲ್ ಹಾಗೂ ಸೋಯಾಬೀನ್ ಎಣ್ಣೆಗಳ ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದ್ದು, ಗೃಹಿಣಿಯರ ಮಾಸಿಕ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ.

ಕೇಂದ್ರ ಸರ್ಕಾರವು ಕಚ್ಚಾ ಹಾಗೂ ಸಂಸ್ಕರಿಸಿದ ಅಡುಗೆ ಎಣ್ಣೆಗಳ ಮೇಲಿನ ಆಮದು ಸುಂಕವನ್ನು ಹೆಚ್ಚಿಸಿರುವುದು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದು ವ್ಯಾಪಾರ ವಲಯ ತಿಳಿಸಿದೆ. ಆಮದು ವೆಚ್ಚ ಹೆಚ್ಚಾದ ಪರಿಣಾಮ ಅದರ ನೇರ ಹೊರೆ ಗ್ರಾಹಕರ ಮೇಲೆ ಬಿದ್ದಿದೆ.

ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆಯ ಬೆಲೆ ಪ್ರತಿ ಲೀಟರ್‌ಗೆ ಸುಮಾರು ₹30ರವರೆಗೆ ಏರಿಕೆಯಾಗಿದೆ. ಪಾಮ್ ಆಯಿಲ್ ಹಾಗೂ ಸೋಯಾಬೀನ್ ಎಣ್ಣೆಗಳ ಬೆಲೆಯೂ ಪ್ರತಿ ಲೀಟರ್‌ಗೆ ₹15ರಿಂದ ₹25ರವರೆಗೆ ಹೆಚ್ಚಳ ಕಂಡಿದೆ. ಇದರಿಂದ ಮನೆಗಳ ದೈನಂದಿನ ಖರ್ಚು ಮತ್ತಷ್ಟು ಏರಿಕೆಯಾಗಿದ್ದು, ಮಧ್ಯಮ ಹಾಗೂ ಬಡ ವರ್ಗದ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಇದೇ ವೇಳೆ, ದೇಶೀಯ ಎಣ್ಣೆಕಾಳು ಬೆಳೆಗಾರರ ಹಿತರಕ್ಷಣೆಯ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿದೆ. ಸಾಸಿವೆ, ಶೇಂಗಾ ಹಾಗೂ ಸೋಯಾಬೀನ್ ಸೇರಿದಂತೆ ದೇಶೀಯ ಎಣ್ಣೆಕಾಳುಗಳಿಗೆ ಉತ್ತಮ ಬೆಲೆ ದೊರೆಯಲು ಆಮದು ಎಣ್ಣೆಗಳ ಮೇಲಿನ ಸುಂಕವನ್ನು ಹೆಚ್ಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಅಡುಗೆ ಎಣ್ಣೆ ದರ ಏರಿಕೆಯ ಪರಿಣಾಮ ಮನೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಹೋಟೆಲ್, ಬೇಕರಿ ಹಾಗೂ ತಿಂಡಿ-ತಿನಿಸು ತಯಾರಿಕಾ ಕ್ಷೇತ್ರಗಳ ಮೇಲೂ ಇದರ ಪರಿಣಾಮ ಬೀರಿದ್ದು, ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಹಾರ ಪದಾರ್ಥಗಳು ಹಾಗೂ ಬೇಕರಿ ಉತ್ಪನ್ನಗಳ ದರವನ್ನು ಹೆಚ್ಚಿಸುವ ಬಗ್ಗೆ ಉದ್ಯಮಿಗಳು ಚಿಂತನೆ ನಡೆಸಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಗ್ರಾಹಕರು ಮತ್ತಷ್ಟು ಬೆಲೆ ಏರಿಕೆಯ ಹೊರೆ ಎದುರಿಸುವ ಸಾಧ್ಯತೆ ಇದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!