ಸುಳ್ಯ, ಜು. 24: ಸುಳ್ಯ ತಾಲೂಕಿನ ಸಂಪಾಜೆ ಸಮೀಪ ವಿವಾಹಿತೆ ಫಾತಿಮತ್ ನಿಶಾನಾ (24) ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಮಾವ ಸಿ.ಪಿ. ಅಳವಿ (54), ಅತ್ತೆ ಆಯಿಷಾ ಸಿ.ಎ. ಹಾಗೂ ನಾದಿನಿ ಫಸೀಲಾ ಸಿ.ಎ. (29) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಸಂಪಾಜೆಯ ಯುವಕನೊಂದಿಗೆ ವಿವಾಹವಾಗಿದ್ದ ಫಾತಿಮತ್ ನಿಶಾನಾ ಅವರು ಜುಲೈ 18ರಂದು ಮೃತಪಟ್ಟಿದ್ದರು. ಸಾವಿನ ಮುನ್ನದ ದಿನ ತಾಯಿ ಜುಬೈದಾ ಅವರಿಗೆ ಕರೆ ಮಾಡಿ, ಅತ್ತೆ-ಮಾವರಿಂದ ಕಿರುಕುಳವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು ಎನ್ನಲಾಗಿದೆ.
ಈ ಕುರಿತು ಜುಬೈದಾ ಅವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನ್ನೊಂದಿಗೆ ಮಾತನಾಡುತ್ತಿದ್ದ ವೇಳೆ ಮಾವ ಫೋನ್ ಕಸಿದುಕೊಂಡು, “ನಿನ್ನ ಮಗಳನ್ನು ಕೊಂದೇ ತೀರುತ್ತೇನೆ” ಎಂದು ಬೆದರಿಕೆ ಹಾಕಿದ್ದ ಎಂದು ಆರೋಪಿಸಿದ್ದಾರೆ.

ಈ ದೂರಿನ ಆಧಾರದ ಮೇಲೆ ಪೊಲೀಸರು ಅತ್ತೆ, ಮಾವ ಹಾಗೂ ನಾದಿನಿಯನ್ನು ಬಂಧಿಸಿದ್ದು, ಫಾತಿಮತ್ ನಿಶಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆ ನಡೆದಿದೆಯೇ ಎಂಬುದು ತನಿಖೆ ಬಳಿಕ ಸ್ಪಷ್ಟವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


