ಬೆಂಗಳೂರು, ಜು. 24: ದೇಶದಲ್ಲಿ ನೀಟ್ ಪರೀಕ್ಷಾ ಪದ್ಧತಿಯನ್ನು ರದ್ದುಪಡಿಸಿ, ವೈದ್ಯಕೀಯ ಹಾಗೂ ತಾಂತ್ರಿಕ ಪದವಿ ಪ್ರವೇಶವನ್ನು ಮತ್ತೆ ರಾಜ್ಯ ಸರ್ಕಾರಗಳ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ವ್ಯಾಪ್ತಿಗೆ ತರಬೇಕು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪಿ.ಎಂ. ಮಾಲತೇಶ್ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ದೇಶದಲ್ಲೇ ಮೊದಲ ಬಾರಿಗೆ ಸಿಇಟಿ ವ್ಯವಸ್ಥೆ ಜಾರಿಗೆ ತಂದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣದ ಅವಕಾಶ ಕಲ್ಪಿಸಿದ್ದರು. ಹಲವು ವರ್ಷಗಳ ಕಾಲ ಯಾವುದೇ ಗೊಂದಲವಿಲ್ಲದೆ ಸಿಇಟಿ ವ್ಯವಸ್ಥೆ ಯಶಸ್ವಿಯಾಗಿ ಜಾರಿಯಲ್ಲಿತ್ತು ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಸಿಇಟಿ ವ್ಯವಸ್ಥೆಯನ್ನು ದುರ್ಬಲಗೊಳಿಸಿ ನೀಟ್ ಪರೀಕ್ಷೆ ಜಾರಿಗೊಳಿಸಿದ ಬಳಿಕ ಕರ್ನಾಟಕದ ವಿದ್ಯಾರ್ಥಿಗಳಿಗೆ ಲಭಿಸುತ್ತಿದ್ದ ವೈದ್ಯಕೀಯ ಸೀಟುಗಳ ಪ್ರಮಾಣ ಕಡಿಮೆಯಾಗಿದೆ. ಕಳೆದ ಆರು ವರ್ಷಗಳಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಲವು ಬಾರಿ ನಡೆದಿದ್ದು, ಪರೀಕ್ಷಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ನೀಟ್ ಪರೀಕ್ಷೆಯಲ್ಲಿನ ಲೋಪಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಿಂದ ವಿದ್ಯಾರ್ಥಿಗಳಲ್ಲಿ ಆತಂಕ ಹೆಚ್ಚಾಗಿದ್ದು, ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ಗಂಭೀರ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿರುವ ಅವರು, ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯ ಅಧಿಕಾರವನ್ನು ಮತ್ತೆ ರಾಜ್ಯಗಳಿಗೆ ವಹಿಸಿ, ನೀಟ್ ಪರೀಕ್ಷಾ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ವಿಷಯದಲ್ಲಿ ಕಾಂಗ್ರೆಸ್ ಪಕ್ಷವು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಅನುಭವ ಮತ್ತು ಮಾರ್ಗದರ್ಶನವನ್ನು ಪಡೆದು ಸದನದಲ್ಲಿ ಸಮಗ್ರ ಚರ್ಚೆ ನಡೆಸಬೇಕು. ಹೋರಾಟದ ಕೇಂದ್ರಬಿಂದುವಾಗಿರಬೇಕಾದ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರದಿಂದ ಗಮನ ಬೇರೆಡೆಗೆ ತಿರುಗಿಸದೆ, ವಿದ್ಯಾರ್ಥಿಗಳ ಹಿತಾಸಕ್ತಿಗಾಗಿ ಹೋರಾಟ ಮುಂದುವರಿಯಬೇಕು ಎಂದು ಮಾಲತೇಶ್ ತಿಳಿಸಿದ್ದಾರೆ.


