ತುಮಕೂರಿನ ಕಾಲ್‌ಟೆಕ್ಸ್ ಸರ್ಕಲ್ ಸಮೀಪದ ವಿಶ್ವಾಸ್ ಜ್ಯುವೆಲರಿಯಲ್ಲಿ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ವಜ್ರ ಮತ್ತು ಚಿನ್ನಾಭರಣಗಳು ನಾಪತ್ತೆಯಾಗಿದ್ದವು. ಅಂಗಡಿಯ ಶಟರ್ ಮುರಿದಿರಲಿಲ್ಲ. ಯಾರೂ ಒಳನುಗ್ಗಿದ ಗುರುತು ಕೂಡ ಇರಲಿಲ್ಲ. ಇದರಿಂದ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿ ತೀವ್ರ ಆತಂಕಕ್ಕೊಳಗಾಗಿದ್ದರು.

ಕಳುವಿನ ರಹಸ್ಯ ಬಯಲಿಗೆಳೆಯಲು ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಕಳ್ಳ ಮನುಷ್ಯನಲ್ಲ, ಒಂದು ಇಲಿ ಎಂಬುದು ಗೊತ್ತಾಗಿದೆ.

ಸಿಸಿಟಿವಿಯಲ್ಲಿ ಇಲಿ ಅಂಗಡಿಗೆ ನುಗ್ಗಿ 10 ಉಂಗುರಗಳು ಹಾಗೂ 3 ಸರಗಳನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಬಳಿಕ ಇಲಿಯ ಚಲನವಲನವನ್ನು ಗಮನಿಸಿದ ಸಿಬ್ಬಂದಿ ಅದರ ಬಿಲವನ್ನು ಪತ್ತೆಹಚ್ಚಿ ತೋಡಿದಾಗ, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಅಲ್ಲಿಯೇ ಸುರಕ್ಷಿತವಾಗಿ ಪತ್ತೆಯಾಗಿವೆ.

ಆಭರಣಗಳು ಮರಳಿ ಸಿಕ್ಕ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ಈ ಅಪರೂಪದ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, “ಇಲಿಯ ಕಳ್ಳತನ” ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.


