ನನ್ನ ಮೇಲೆ ನೂರು ಕೇಸ್ ಬಿದ್ದರೂ ಜಗ್ಗಲ್ಲ..-ಅರುಣ್ ಕುಮಾರ್ ಪುತ್ತಿಲ.

ಪುತ್ತೂರು: ನರಿಮೊಗರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುರುಷರಕಟ್ಟೆ- ಶಾಂತಿಗೋಡು ರಸ್ತೆಯಲ್ಲಿ ಮಾಯಂಗಲದಿಂದ ಕೂಡುರಸ್ತೆಯವರೆಗಿನ ಭಾಗ ಸಂಪೂರ್ಣ ಕೆಟ್ಟು ಹೋಗಿದ್ದು, ಅ ಕಾರಿಗಳು ತಾವು ನೀಡಿದ ಭರವಸೆಯನ್ನು ಈಡೇರಿಸಿಲ್ಲ ಎಂದು ಆಪಾದಿಸಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಗುರುವಾರ ಪುರುಷರಕಟ್ಟೆಯಲ್ಲಿರುವ ನರಿಮೊಗರು ಗ್ರಾಪಂ ಕಚೇರಿ ಎದುರು ಅರ್ಧದಿನ ಧರಣಿ, ಪ್ರತಿಭಟನಾ ಸಭೆ ನಡೆಸಲಾಯಿತು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಅವರು ಮಧ್ಯಾಹ್ನ ಸ್ಥಳಕ್ಕೆ ಭೇಟಿ ನೀಡಿ,ಹದಗೆಟ್ಟು ಹೋದ ರಸ್ತೆಯ ಎರಡೂ ಭಾಗದ ಚರಂಡಿ ದುರಸ್ತಿ ಕಾರ್ಯ ನಾಳೆಯಿಂದಲೇ ಆರಂಭಿಸಲಾಗುವುದು. ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ ನಡೆಸಲು 15 ದಿನಗಳ ಕಾಲಾವಕಾಶ ಬೇಕು ಎಂದು ಹೇಳಿದ ಬಳಿಕ ಪ್ರತಿಭಟನಾ ಧರಣಿ ವಾಪಸ್ ಪಡೆಯಲಾಯಿತು.


ಬೆಳಗ್ಗೆ 10.30ಕ್ಕೆ ಪಂಚಾಯಿತಿ ಕಚೇರಿ ಎದುರು ಧರಣಿ ಆರಂಭಿಸಲಾಯಿತು. ಮಾಜಿ ತಾಪಂ ಸದಸ್ಯ ಜಯರಾಮ ಪೂಜಾರಿ, ರಿಕ್ಷಾ ಚಾಲಕ ರಾಧಾಕೃಷ್ಣ, ಮಾಜಿ ಗ್ರಾಪಂ ಅಧ್ಯಕ್ಷ ಸುಭಾಶ್ಚಂದ್ರ ಶೆಣೈ, ಸ್ಥಳೀಯರಾದ ದೇವಪ್ಪ, ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ಕಾರ್ಯದರ್ಶಿ ರವಿಕುಮಾರ್ ರೈ ಮಠ, ಮುಖಂಡರಾದ ಪ್ರಶಾಂತ್ ನೆಕ್ಕಿಲಾಡಿ, ನಾರಾಯಣ ಪ್ರಕಾಶ್, ಶ್ರೀರಾಮ ಭಟ್ ಪಾತಾಳ ಮತ್ತಿತರರು ಮಾತನಾಡಿದರು.

ಮಧ್ಯಾಹ್ನ 1 ಗಂಟೆಗೆ ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಭಂಡಾರಿ, ಜಿಪಂ ಪಂಚಾಯತ್‌ರಾಜ್ ಎಂಜಿನಿಯರ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭರತ್, ನರಿಮೊಗರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಆಶಾ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ನವೀನ್ ಭಂಡಾರಿ ಮಾತನಾಡಿ, ಗ್ರಾಪಂ ಆಡಳಿತಾಧಿಕಾರಿ ಅವರ ಸಮ್ಮುಖದಲ್ಲಿ ರಸ್ತೆ ಬದಿಯ ಚರಂಡಿ ದುರಸ್ತಿಗೆ 20 ಸಾವಿರ ರೂ. ಅನುದಾನ ಮಂಜೂರು ಮಾಡಲಾಗಿದೆ. ಸರಕಾರಿ ನಿಯಮಾವಳಿಗಳನ್ನು ಪಾಲಿಸಿ ವಾರದೊಳಗೆ ಕೆಲಸ ಮಾಡಲಾಗುವುದು. ಬಳಿಕ ಶಾಸಕರು ಅನುದಾನವಿಟ್ಟು ರಸ್ತೆಯ ಕಾಮಗಾರಿ ನಡೆಸಲಾಗುವುದು ಎಂದರು.


ಇದರಿಂದ ಕೆರಳಿದ ಪ್ರತಿಭಟನಾಕಾರರು, 20 ಸಾವಿರ ರೂ. ಗಳ ಚರಂಡಿ ಕಾಮಗಾರಿ ನಡೆಸಲು ವಾರವೇಕೆ ಬೇಕು? ನಾಳೆಯೇ ಆರಂಭಿಸಿ. ಅಗತ್ಯ ಬಿದ್ದರೆ ಮುಂಗಡ ಕಾಮಗಾರಿ ನಡೆಸಿ. ನಿಮಗೆ ಜೆಸಿಬಿ ಸಿಕ್ಕಿಲ್ಲದಿದ್ದರೆ ನಾವು ಒದಗಿಸಿ ಕೊಡುತ್ತೇವೆ. ಹಣವಿಲ್ಲದಿದ್ದರೆ ಹೇಳಿ. ಅದನ್ನೂ ನಾವು ಸಂಗ್ರಹಿಸಿ ಈಗ 20 ಸಾವಿರ ನಿಮ್ಮ ಕೈಯ್ಯಲ್ಲಿಡುತ್ತೇವೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಸಾಕಷ್ಟು ಹೊತ್ತು ಈ ವಿಚಾರದಲ್ಲಿ ಚರ್ಚೆ ನಡೆದ ಬಳಿಕ, ಚರಂಡಿ ದುರಸ್ತಿ ಕಾರ್ಯ ನಾಳೆಯಿಂದಲೇ ಆರಂಭಿಸಲಾಗುವುದು. ಆದರೆ ರಸ್ತೆ ದುರಸ್ತಿಗೆ 16 ದಿನಗಳ ಕಾಲಾವಕಾಶ ಬೇಕೇ ಬೇಕು ಎಂದು ಕಾರ್ಯನಿರ್ವಹಣಾ ಅಧಿಕಾರಿ ಹೇಳಿದರು. ಅಂತಿಮವಾಗಿ ಅರುಣ್ ಕುಮಾರ್ ಪುತ್ತಿಲ ಈ ಸೂತ್ರಕ್ಕೆ ಒಪ್ಪುವ ಮೂಲಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಜು.23ರಂದು ಸ್ಥಳಕ್ಕೆ ನಾವು ಭೇಟಿ ನೀಡಿದಾಗ ಅಲ್ಲಿಗೆ ಬಂದಿದ್ದ ಪಿಡಿಒ ಆಶಾ 2 ದಿನಗಳಲ್ಲಿ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದ್ದರು. ಆದರೆ ಬಳಿಕ ಹಠಾತ್ ನಿಲುವು ಬದಲಾಯಿಸಿ ಸುಮ್ಮನಾದರು. 27ರಂದು ಪ್ರತಿಭಟನೆ ಮಾಡಿದಾಗ ನಾವು ಕರೆ ಮಾಡಿದರೂ ಸ್ವೀಕರಿಸಲಿಲ್ಲ ಎಂದು ಹೇಳಿದ ಅರುಣ್ ಪುತ್ತಿಲ, ಪಂಚಾಯಿತಿ ಜವಾಬ್ದಾರಿ ಹೊತ್ತಿರುವ ಅಧಿಕಾರಿ ಈ ರೀತಿ ಫೋನ್ ಸ್ವೀಕರಿಸದೆ ಬೇಜಬ್ದಾರಿ ತೋರಿಸಿದ್ದು ಖಂಡನೀಯ ಎಂದರು. ನೀವೊಬ್ಬರು ಮಹಿಳೆಯಾದ ಕಾರಣ ನಿಮ್ಮಲ್ಲಿ ಅಮ್ಮನನ್ನು ಕಂಡು ನಾವು ಕ್ಷಮಿಸಿದ್ದೇವೆ. ಇಲ್ಲದಿದ್ದರೆ ಇವತ್ತು ನೀವು ಕ್ಷಮೆ ಕೇಳದೆ ಕಚೇರಿ ಪ್ರವೇಶಿಸಲೂ ಬಿಡುತ್ತಿರಲಿಲ್ಲ ಎಂದರು.

ರಸ್ತೆ ದುರಸ್ತಿಗೆ ಪ್ರತಿಭಟನೆ ಮಾಡಿದ್ದಕ್ಕೆ ನಮ್ಮ ಮೇಲೆ ಕೇಸು ಹಾಕಿದ್ದಾರೆ. ಇದು ನನ್ನ ಮೇಲೆ ಬಿದ್ದಿರುವ 39ನೇ ಕೇಸು. ಜನಪರ ಹೋರಾಟಕ್ಕಾಗಿ ನೂರು ಕೇಸ್ ಬೇಕಾದರೂ ಹಾಕಿಸಿಕೊಳ್ಳಲು ತಯಾರಿದ್ದೇನೆ. ಆದರೆ ನ್ಯಾಯಪರ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪುತ್ತಿಲ ಹೇಳಿದರು. ಹಲವು ಶಾಸಕರನ್ನು ಕಂಡಿದ್ದೇವೆ. ಆದರೆ ಸರ್ವಾಧಿಕಾರ ಧೋರಣೆ.. ಅವರು ಯಾರು ಕೇಳೋದಿಕ್ಕೆ ಎಂಬ ಅಹಂಕಾರ ಇದೆಲ್ಲ ನಡೆಯೋದಿಲ್ಲ. ಅಧಿಕಾರ ಶಾಶ್ವತವಲ್ಲ ಎಂಬುದು ತಿಳಿದಿರಲಿ. ಮತ್ತೆ ನಾನೇ ಗೆಲ್ತೇನೆ..ಸಚಿವವಾಗ್ತೇನೆ ಎಂಬೆಲ್ಲ ಕನಸಿರಬಹುದು. ಆದರೆ ಜನರ ವಿರುದ್ಧ ಹೋದರೆ ನಾಳೆ ಏನಾದೀತು ಎಂಬ ಊಹನೆ ಇರಲಿ. ಯಾವ ಶಾಸಕರೂ ಅವರ ಮನೆಯಿಂದ ಹಣ ತಂದು ಕೆಲಸ ಮಾಡುವುದಲ್ಲ. ದಪ್ಪ ಚರ್ಮದ ಅಧಿ ಕಾರಿಗಳು ಸಮಾಜದ ಋಣ ತೀರಿಸುವ ಗುಣ ಹೊಂದಿರಲಿ. ಇಲ್ಲದಿದ್ದರೆ ಜನರ ಶಾಪ ತಟ್ಟೀತು ಎಂದು ಎಚ್ಚರಿಸಿದರು. ದುರಸ್ತಿ ಆಗದಿದ್ದರೆ ರಸ್ತೆಯನ್ನೇ ಬಂದ್ ಮಾಡುತ್ತೇವೆ. ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ ಎಂದವರು ಹೇಳಿದರು. ಧರಣಿಯಲ್ಲಿ ಪ್ರಮುಖರಾದ ಉಮೇಶ್ ಕೋಡಿಬೈಲು, ಮಹೇಂದ್ರವರ್ಮ, ಅನಿಲ್ ತೆಂಕಿಲ, ತಾರಾನಾಥ ಆನಡ್ಕ, ಪುರಂದರ, ಕೇಶವ ಮುಕ್ವೆ, ದಿನೇಶ್ ಮಜಲು ಮತ್ತಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!