ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಸದಾ ಸ್ಮರಣೀಯ: ಬಿ. ಜಯಕರ ಶೆಟ್ಟಿ

ಉಡುಪಿ: ತುಳುನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಕಯ್ಯಾರ ಕಿಞ್ಞಣ್ಣ ರೈ ಅವರ ಕೊಡುಗೆ ಅಪಾರವಾಗಿದ್ದು, ಅವರನ್ನು ಈ ನಾಡಿನ ಜನತೆ ಎಂದಿಗೂ ಮರೆಯಬಾರದು ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರ ಹಾಗೂ ತುಳುಕೂಟ ಉಡುಪಿ ಸಹಯೋಗದಲ್ಲಿ ಉಡುಪಿಯ ಮುಕುಂದ ಕೃಪಾ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ನೆನಪಿನ ‘ಕಿನ್ಯ ಜೋಕ್ಲೆಡ್ದ್ ಸೊರ ಸಂಪು’ ಕಾರ್ಯಕ್ರಮವನ್ನು ಅವರು ಕಯ್ಯಾರ ಕಿಞ್ಞಣ್ಣ ರೈ ಅವರ ಪದ್ಯ ಹಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ಕರ್ನಾಟಕದ ಮಹಾಕವಿ, ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕ ಏಕೀಕರಣ ಚಳವಳಿಯ ಮುಂಚೂಣಿ ನಾಯಕರಾಗಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರು ಕನ್ನಡ ಮತ್ತು ತುಳು ಭಾಷೆಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ತುಳು ಭಾಷೆಯ ಉಳಿವಿಗಾಗಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಉಡುಪಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಆಯೋಜಿಸಲು ತುಳುಕೂಟ ಉಡುಪಿ ಹಾಗೂ ರೇಡಿಯೋ ಮಣಿಪಾಲ ಯೋಜನೆ ರೂಪಿಸಿವೆ. ಅದರ ಅಂಗವಾಗಿ ಮುಕುಂದ ಕೃಪಾ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.


ಕಾರ್ಯಕ್ರಮದಲ್ಲಿ ತುಳುಕೂಟದ ಉಪಾಧ್ಯಕ್ಷ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಅವರ ಅಳಿಯ ಭುವನ ಪ್ರಸಾದ್ ಹೆಗ್ಡೆ, ಗೌರವ ಸಲಹೆಗಾರ ವಿಶ್ವನಾಥ ಶೆಣೈ, ರೇಡಿಯೋ ಮಣಿಪಾಲ ಕಾರ್ಯಕ್ರಮ ಸಂಯೋಜಕಿ ಡಾ. ರಶ್ಮಿ ಅಮ್ಮೆಂಬಳ, ಮುಕುಂದ ಕೃಪಾ ಶಾಲೆಯ ಪ್ರಾಂಶುಪಾಲೆ ವಿನುತಾ ಎಸ್. ನಾಯಕ್ ಮಾತನಾಡಿದರು.


ಕಾರ್ಯಕ್ರಮದ ಸಂಚಾಲಕಿ ವಿದ್ಯಾ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯ ಎಂದು ತಿಳಿಸಿದರು.
ಪ್ರಭಾವತಿ ವಿಶ್ವನಾಥ್ ಸ್ವಾಗತಿಸಿದರು. ಗಂಗಾಧರ ಕಿದಿಯೂರು ವಂದಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
ಶಾಲಾ ಮಕ್ಕಳು ತುಳು ಕಥೆ, ಗಾದೆ, ಕವಿತೆ ಹಾಗೂ ಪದ್ಯಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!